ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‍ನಲ್ಲಿ ಡೀಸೆಲ್ ಕಳ್ಳತನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಕೆಲವೊಂದು ನಿಯಮವನ್ನು ಜಾರಿ ಮಾಡಿದೆ.
ಹೌದು, ರಾತ್ರಿ ವೇಳೆ ಬಸ್ ನಿಲ್ಲಿಸಿದಾಗ ಡೀಸೆಲ್ ಕಳ್ಳತನ ಹೆಚ್ಚಾಗುತ್ತಿದೆ. ಈ ವಿಚಾರದ ಬಗ್ಗೆ ತಲೆಕೆಡಿಸಿಕೊಂಡಿರುವ ಕೆಎಸ್‌ಆರ್‌ಟಿಸಿ ಈಗ ಇದರ ನಿಯಂತ್ರಣಕ್ಕೆ ಒಂದಿಷ್ಟು ಕ್ರಮ ಕೈಗೊಂಡಿದ್ದು, ಎಲ್ಲ ನಿಗಮಗಳಿಗೆ ಸುತ್ತೋಲೆ ಹೊರಡಿಸಿದೆ.
ಸುತ್ತೋಲೆಯಲ್ಲಿ ಏನಿದೆ?
1. ನಿಗಮದ ಎಲ್ಲಾ ವಾಹನಗಳ ಇಂಧನ ಟ್ಯಾಂಕಿನ ಒಳಗೆ ಪೈಪ್ ಮುಂತಾದ ವಸ್ತು ಹೋಗದಂತೆ ಮೆಷ್‍ನ್ನು ಕಡ್ಡಾಯವಾಗಿ ಅಳವಡಿಸುವುದು.
2. ನಿಗಮದ ಎಲ್ಲಾ ವಾಹನಗಳ ಇಂಧನ ಟ್ಯಾಂಕಿನ ಮುಚ್ಚಳಕ್ಕೆ ಬೀಗ ಹಾಕುವ ವ್ಯವಸ್ಥೆ ಮಾಡುವುದು.
3. ರಾತ್ರಿ ತಂಗುವ ವಾಹನಗಳನ್ನು ನಮುನೆ-4ರಲ್ಲಿ ನಿಗದಿಪಡಿಸಿರುವ ಸ್ಥಳದಲ್ಲಿನ ಬಸ್ ನಿಲ್ದಾಣ, ಪೊಲೀಸ್ ಠಾಣೆ, ಜನ ವಸತಿ ಸ್ಥಳ ಅಥವಾ ಗ್ರಾಮ ಪಂಚಾಯ್ತಿ ಕಛೇರಿ ಬಳಿ ನಿಲ್ಲಿಸುವುದು.
4. ಚಾಲಕ/ನಿರ್ವಾಹಕರು ಕಡ್ಡಾಯವಾಗಿ ವಾಹನದಲ್ಲಿಯೇ ತಂಗುವುದು.
5. ಚಾಲಕ/ನಿರ್ವಾಹಕರು ಊಟಕ್ಕೆ ಹೋಗುವ ಸಮಯದಲ್ಲಿ ಇಬ್ಬರಲ್ಲಿ ಯಾರಾದರು ಒಬ್ಬರು ತಪ್ಪದೇ ವಾಹನದಲ್ಲಿ ಇರಬೇಕು.
6. ರಾತ್ರಿ ತಂಗುವ ವಾಹನಗಳಲ್ಲಿ ಚಾಲನಾ ಸಿಬ್ಬಂದಿ ಇರುವ ಬಗ್ಗೆ ಭದ್ರತಾ ಶಾಖೆ ಮತ್ತು ತನಿಖಾದಳದ ಸಿಬ್ಬಂದಿ/ ಮೇಲ್ವಿಚಾರಕರುಗಳಿಂದ ಅನಿರೀಕ್ಷಿತ ತನಿಖೆಗೊಳಪಡಿಸುವ ವ್ಯವಸ್ಥೆ ಮಾಡುವುದು.
7. ಅನಧಿಕೃತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡುವ ಹಾಗೂ ವಾಹನವನ್ನು ಅನಧಿಕೃತವಾಗಿ ತೊರೆದು ಹೋಗುವಂತಹ ಪ್ರಕರಣದಲ್ಲಿ ಅಂತಹ ಸಿಬ್ಬಂದಿ ವಿರುದ್ಧ ತೀವ್ರ ರೀತಿಯ ಶಿಸ್ತು ಕ್ರಮ ಜರುಗಿಸುವುದು.
8. ವಾಹನಗಳ ಸುರಕ್ಷತೆಯ ಬಗ್ಗೆ ಚಾಲಕ/ನಿರ್ವಾಹಕರುಗಳಿಗೆ ತಿಳುವಳಿಕೆ ನೀಡುವ ವ್ಯವಸ್ಥೆ ಮಾಡುವುದು.
9. ಚಾಲಕ/ ನಿರ್ವಾಹಕರು ತರಬೇತಿ ಕಾರ್ಯಕ್ರಮಗಳಲ್ಲಿ ವಾಹನಗಳ ಸುರಕ್ಷತೆ ಬಗ್ಗೆ ತಿಳುವಳಿಕೆ ನೀಡುವುದು.