– ವಾಲ್ಮೀಕಿ ಜಯಂತಿ ಮೆರವಣಿಗೆ ವೇಳೆ ದುಷ್ಕೃತ್ಯ
– ಎಂಟು ಮಂದಿಯಿಂದ ಓರ್ವನ ಹತ್ಯೆ
– ಅಳಿಯನ ಮೇಲಿನ ಕೋಪಕ್ಕೆ ಮಾವ ಬಲಿ
ಬಾಗಲಕೋಟೆ: ವಾಲ್ಮೀಕಿ ಜಯಂತಿ ಮೆರವಣಿಗೆ ವೇಳೆ ಯುವಕನ ಕಾಲು ತುಳಿದ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ನಿಮ್ಮ ಅಳಿಯ ಕಾಲು ತುಳಿದ ಎಂದು ನೆಪವಿಟ್ಟುಕೊಂಡು ಜಗಳಕ್ಕಿಳಿದ 8 ಮಂದಿ ದುಷ್ಕರ್ಮಿಗಳು ಕೆಎಸ್ಆರ್‌ಟಿಸಿ ಚಾಲಕರ ಎದೆಗೆ ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿ ಕ್ರೌರ್ಯ ಮೆರೆದಿದ್ದಾರೆ.
ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಕೆಎಸ್ಆರ್‌ಟಿಸಿ ಬಸ್ ಚಾಲಕ ಶಿವಪ್ಪ ಪೂಜಾರಿ(43) ಕೊಲೆಯಾದ ದುರ್ದೈವಿ. ಶೇಖರಪ್ಪ ಪೂಜಾರಿ, ಗ್ಯಾನೆಪ್ಪ ಪೂಜಾರಿ, ಶಿವಪ್ಪ ಯಲ್ಲಪ್ಪ ಇದ್ದಲಗಿ, ಮುತ್ತಪ್ಪ ಪೂಜಾರಿ, ಶ್ರೀಶೈಲ್ ಪೂಜಾರಿ ಸೇರಿದಂತೆ 8 ಜನರು ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ. ಕೇವಲ ಕಾಲು ತುಳಿದ ಎಂಬ ಕಾರಣವನ್ನಿಟ್ಟುಕೊಂಡು ಶುರುವಾದ ಜಗಳ, ಮಾರಾಮಾರಿಗೆ ತಿರುಗಿ ಕೊನೆಗೆ 8 ಜನರು ಸೇರಿ ಶಿವಪ್ಪ ಅವರನ್ನು ಕೊಲೆ ಮಾಡಿದ್ದಾರೆ. ಇದನ್ನೂ ಓದಿ:ಸಿನಿಮಾ ಶೈಲಿಯಲ್ಲಿ ಯುವಕನ ಕೊಲೆಗೆ ಸಂಚು – ಕೈಗೆ ಚಾಕು ಇರಿತ
ಸೋಮವಾರ ರಾತ್ರಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಮೆರವಣಿಗೆ ವೇಳೆ ಶಿವಪ್ಪ ಅವರ ಅಳಿಯ ಅಯ್ಯಪ್ಪ ಪೂಜಾರಿ ಹಾಗೂ ಕೆಲ ಯುವಕರು ಕುಣಿಯುತ್ತಿದ್ದರು. ಈ ವೇಳೆ ಗ್ಯಾನಪ್ಪಗೆ ಅಯ್ಯಪ್ಪ ಅವರ ಕಾಲು ಬಡಿದಿತ್ತು. ಇಷ್ಟಕ್ಕೆ ಸಿಟ್ಟಿಗೆದ್ದ ಗ್ಯಾನಪ್ಪ ಅಯ್ಯಪ್ಪ ಅವರ ಜೊತೆ ಜಗಳಕ್ಕೆ ನಿಂತುಕೊಂಡನು. ಆದರೆ ಅಲ್ಲಿದ್ದ ಹಿರಿಯರು ಇಬ್ಬರನ್ನೂ ಸಮಾಧಾನ ಮಾಡಿ ಕಳುಹಿಸಿದ್ದರು. ಇದನ್ನೂ ಓದಿ:ತುಂಬು ಗರ್ಭಿಣಿಗೆ ವರದಕ್ಷಿಣೆ ಕಿರುಕುಳ-ಪ್ರಶ್ನಿಸಿದ್ದಕ್ಕೆ ಅತ್ತೆ ಮೇಲೆ ಲಾಂಗ್ ಅಟ್ಯಾಕ್
ಆದರೆ ಇಷ್ಟಕ್ಕೆ ಸುಮ್ಮನಾಗದ ಗ್ಯಾನಪ್ಪ, ನಿಮ್ಮ ಅಳಿಯನಿಗೆ ಬುದ್ಧಿ ಹೇಳು ಎಂದು ಶಿವಪ್ಪ ಅವರ ಜೊತೆ ಮಾತುಕತೆ ಶುರುಮಾಡಿದ್ದನು. ಆಗ ಮಾತುಕತೆ ಜಗಳಕ್ಕೆ ತಿರುಗಿ, ಮಾರಾಮಾರಿಯಾಗಿ ಕೊನೆಗೆ ಶಿವಪ್ಪ ಕೊಲೆಯಾಗಿದ್ದಾರೆ. ಜಗಳದಲ್ಲಿ ಅಳಿಯನ ಪರ ಮಾತಾಡೋಕೆ ಬಂದ ಶಿವಪ್ಪರನ್ನು 8 ಜನ ಸೇರಿ ಕೊಲೆ ಮಾಡಿದ್ದಾರೆ. ಕಟ್ಟಿಗೆಗಳಿಂದ ಹೊಡೆದು, ಕುಡಗೋಲಿನಿಂದ ಶಿವಪ್ಪನ ಎದೆಗೆ ಕೊಚ್ಚಿ ಕೊಲೆಗೈದಿದ್ದಾರೆ. ಇದನ್ನೂ ಓದಿ:ಪಬ್‍ಜಿ ಕೊಲೆ ಪ್ರಕರಣ – ತರಕಾರಿ ಕತ್ತರಿಸಿದಂತೆ ತಂದೆಯ ರುಂಡ, ಕಾಲು ಕತ್ತರಿಸಿದ ಮಗ
ಸದ್ಯ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 8 ಮಂದಿ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.