ಚಿಕ್ಕಮಗಳೂರು: ಕೆಎಸ್ಆರ್‌ಟಿಸಿ ಹಾಗೂ ಖಾಸಗಿ ಬಸ್ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಸರ್ಕಾರಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕಡ್ಲೂರು ಸಮೀಪದ ಪುಂಡನಹಳ್ಳಿಯಲ್ಲಿ ನಡೆದಿದೆ.
ಮೃತ ಚಾಲಕನನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗದ್ದಿಗೆರೆಯ ಪುಟ್ಟಸ್ವಾಮಿ ಎಂದು ಗುರುತಿಸಲಾಗಿದೆ. ಮೈಸೂರಿನಿಂದ ಹೊಸಪೇಟೆಗೆ ಹೋಗುತ್ತಿದ್ದ ಸರ್ಕಾರಿ ಬಸ್ ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.
ಬೀರೂರು ಸಮೀಪ ಸಾಧಾರಣ ಮಳೆ ಆಗುತ್ತಿರುವುದರಿಂದ ವೇಗವಾಗಿದ್ದ ಖಾಸಗಿ ಬಸ್ ಕಂಟ್ರೋಲ್ ಸಿಗದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಬಸ್ಸಿನ ಪ್ರಯಾಣಿಕರು ಹೇಳಿದ್ದಾರೆ.
ಬಸ್ಸಿನಲ್ಲಿ ಸುಮಾರು 35 ಜನ ಪ್ರಯಾಣಿಸುತ್ತಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಗಾಯಾಳುಗಳನ್ನು ಬೀರೂರು, ಕಡೂರು ಹಾಗೂ ತರೀಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ತೀವ್ರ ಪೆಟ್ಟಾದವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.