ಉಡುಪಿ :ನಗರದ ನೂತನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಡಾ. ವಿ ಎಸ್ ಆಚಾರ್ಯ ಹೆಸರು ಇಡಬೇಕು ಎಂದು ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.
ಬನ್ನಂಜೆಯಲ್ಲಿ ನೂತನವಾಗಿ ನಿರ್ಮಾಣ ಆಗಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಉಡುಪಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಎಂದು ಕಟ್ಟಡ ನಿರ್ಮಾಣದ ಇಂಜಿನಿಯರ್‌ಗಳು ಗುತ್ತಿಗೆದಾರರು ಬೋರ್ಡ್ ತಯಾರು ಮಾಡಿದ್ದರು.
ಈ ವಿಚಾರ ತಿಳಿದು ಉಡುಪಿ ಶಾಸಕ ರಘುಪತಿ ಭಟ್ ಆ ಬೋರ್ಡ್ ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಯಾವುದೇ ಕಾರಣಕ್ಕೂ ಈ ಬೋರ್ಡ್ ಅಳವಡಿಸಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ಹಟ್ಟಿಗೆ ನುಗ್ಗಿ ಗೋವು ಕಳ್ಳತನ- ಪೊಲೀಸ್ ಠಾಣೆ ಮುಂದೆ ಪ್ರತಿಭಟನಾ ಭಜನೆ
ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಡಾ. ವಿ ಎಸ್ ಆಚಾರ್ಯ ಅವರ ಕೊಡುಗೆ ಮಹತ್ವದ್ದು. ಸಾರ್ವಜನಿಕವಾಗಿ ಬಳಸಲ್ಪಡುವ ಬಸ್ ನಿಲ್ದಾಣಕ್ಕೆ ಆಚಾರ್ಯರ ಹೆಸರು ಸೂಕ್ತ ಎಂದು ಶಾಸಕರು ಹೇಳಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವರ ಬಳಿ ಮಾತುಕತೆ ಮಾಡುವುದಾಗಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ರಘುಪತಿ ಭಟ್, ಲಕ್ಷ್ಮಣ ಸವದಿ ಅವರು ಸಾರಿಗೆ ಸಚಿವರಾಗಿದ್ದಾಗ ಸರ್ಕಾರದ ಮುಂದೆ ಈ ಪ್ರಸ್ತಾಪವನ್ನು ಸಲ್ಲಿಸಲಾಗಿತ್ತು. ಡಾಕ್ಟರ್ ಆಚಾರ್ಯ ಅವರ ಹೆಸರು ಇಡಲು ಯಾರ ವಿರೋಧ ಇಲ್ಲದಿದ್ದರೆ ನಮ್ಮ ಅಭ್ಯಂತರ ಇಲ್ಲ ಎಂದು ಅಂದೇ ಹೇಳಿದ್ದರು. ಶ್ರೀರಾಮುಲು ಈಗ ಸಾರಿಗೆ ಸಚಿವರಾಗಿದ್ದಾರೆ. ವಿಎಸ್ ಆಚಾರ್ಯ ಅವರ ಹೆಸರಿನೊಂದಿಗೆ ಬಸ್ ಸ್ಟ್ಯಾಂಡ್ ಶೀಘ್ರ ಉದ್ಘಾಟನೆಯಾಗಿ ಜನರ ಸೇವೆಗೆ ಬಳಕೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.