ಚಿಕ್ಕಬಳ್ಳಾಪುರ: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ಮಾಸುವ ಮುನ್ನವೇ ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವಾರಸುದಾರರಿಲ್ಲದ ನಾಲ್ಕು ಅನುಮಾನಸ್ಪದ ಬ್ಯಾಗ್‍ಗಳು ಪತ್ತೆಯಾಗಿ ಆತಂಕ ಸೃಷ್ಟಿಯಾಗಿತ್ತು.
ಮಧ್ಯಾಹ್ನ 12.30ರ ಸುಮಾರಿಗೆ ಚಿಕ್ಕಬಳ್ಳಾಪುರ ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ 4 ಅನುಮಾನಸ್ಪದ ಬ್ಯಾಗ್‍ಗಳು ಪತ್ತೆಯಾಗಿದ್ದವು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕೂರಲು ಹಾಕಿದ ಗ್ರಾನೈಟ್ ಮೇಜುಗಳ ಕೆಳಭಾಗದಲ್ಲಿ ಬ್ಯಾಗ್‍ಗಳು ಕಂಡು ಬಂದಿದ್ದವು. ಪ್ರಯಾಣಿಕರು ಕೂರಲು ಹಾಕಿದ್ದ 4 ಗ್ರಾನೆಟ್ ಮೇಜುಗಳ ಕೆಳಭಾಗದಲ್ಲಿ ಅದು 4 ಕಡೆ ತರಹೇವಾರಿ ಬಣ್ಣಗಳಿಂದ ಕೂಡಿದ ಬೃಹತ್ ಗಾತ್ರದ ಬ್ಯಾಗುಗಳು ಪತ್ತೆಯಾಗಿದ್ದವು.
Advertisement
Advertisement
ಬ್ಯಾಗ್‍ಗಳ ಗಾತ್ರ ಅವುಗಳ ಬಣ್ಣ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದವು. ಇದರಿಂದ ಆತಂಕಗೊಂಡ ಪ್ರಯಾಣಿಕರು ಹಾಗೂ ಸ್ಥಳೀಯ ಕೆಎಸ್ಆರ್‌ಟಿಸಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬ್ಯಾಗ್‍ಗಳನ್ನು ಸುತ್ತುವರಿದು ಪ್ರಯಾಣಿಕರು ಬಸ್ ನಿಲ್ದಾಣದಿಂದ ಹೊರಗೆ ಕಳುಹಿಸುವ ಕೆಲಸ ಮಾಡಿದರು. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಯಿಂದ ಒಂದು ಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಿದ ಪೊಲೀಸರು ಕೊನೆಗೆ ಬ್ಯಾಗ್‍ಗಳನ್ನು ಬಸ್ ನಿಲ್ದಾಣದಿಂದ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಪರಿಶೀಲನೆ ನಡೆಸಿದರು. ಈ ವೇಳೆ 4 ಬ್ಯಾಗ್‍ಗಳಲ್ಲಿ ಗುಟ್ಕಾ ಪ್ಯಾಕೆಟ್‍ಗಳು ಕಂಡು ಬಂದಿದ್ದು, ಎಲ್ಲರೂ ನಿಟ್ಟುಸಿರು ಬಿಡುವಂತಾಯಿತು.
Advertisement
Advertisement
ಸದ್ಯ ಅನುಮಾನಾಸ್ಪದವಾಗಿ ಸಿಕ್ಕ ಗುಟ್ಕಾ ತುಂಬಿದ 4 ಬ್ಯಾಗ್‍ಗಳನ್ನು ವಶಕ್ಕೆ ಪಡೆದಿರುವ ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇನ್ನು ಈ ನಾಲ್ಕು ಬ್ಯಾಗ್‍ಗಳನ್ನು ಯಾರು ತಂದು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದರು ಎಂಬ ಮಾಹಿತಿ ಸಿಕ್ಕಿಲ್ಲ. ಬೇರೆ ಯಾವುದೋ ನಗರದಿಂದ ಚಿಕ್ಕಬಳ್ಳಾಪುರಕ್ಕೆ ಬಸ್ ಮುಖಾಂತರ ಬ್ಯಾಗ್‍ಗಳನ್ನು ಕಳುಹಿಸಿರುವ ಸಾಧ್ಯತೆಯಿದೆ. ಬ್ಯಾಗ್‍ಗಳನ್ನು ಪಡೆದುಕೊಳ್ಳಲು ವಾರಸುದಾರರು ಬಾರದ ಹಿನ್ನೆಲೆ ಬಸ್ ಚಾಲಕನೋ ಅಥವಾ ನಿರ್ವಾಹಕನೋ ಬಸ್ಸಿನಿಂದ ಕೆಳಗೆ ಇಳಿಸಿ ಬಿಟ್ಟು ಹೋಗಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯಿಂದಷ್ಟೇ ಸತ್ಯಾಂಶ ಬೆಳಕಿಗೆ ಬರಬೇಕಿದೆ.