ತುಮಕೂರು: ಕೆಎಸ್‍ಆರ್‍ಟಿಸಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದ ಘಟನೆ ತುಮಕೂರಿನ ಪಾವಗಡದಲ್ಲಿ ನಡೆದಿದೆ.
ಇಲ್ಲಿನ ಎಮ್.ಜಿ ಪೆಟ್ರೋಲ್ ಬಂಕ್ ಬಳಿ ಮುನ್ನುಗ್ಗಿ ಬರುತ್ತಿದ್ದ ಖಾಸಗಿ ಬಸ್ ಹಾಗೂ ಕೆಎಸ್‍ಆರ್‍ಟಿಸಿ ಬಸ್ ನಡುವೆ ಸಂಭವಿಸುತ್ತಿದ್ದ ಅಪಘಾತವನ್ನು ಸರ್ಕಾರಿ ಬಸ್ ಚಾಲಕ ತನ್ನ ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದಾರೆ. ಖಾಸಗಿ ಬಸ್ ನಿಲ್ದಾಣದಿಂದ ತುಮಕೂರು ರಸ್ತೆಗೆ ಖಾಸಗಿ ಬಸ್ಸು ಏಕಾಏಕಿಯಾಗಿ ಬರುತಿತ್ತು. ಪಾವಗಡ ಶನೇಶ್ವರ ಸ್ವಾಮಿ ಸರ್ಕಲ್ ನಿಂದ ಸರ್ಕಾರಿ ಬಸ್ ವೇಗವಾಗಿ ಬರುತಿತ್ತು. ಈ ಎರಡು ಬಸ್ಸುಗಳ ನಡುವೆ ಡಿಕ್ಕಿಯಾಗಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು.
ಖಾಸಗಿ ಬಸ್ ಕಂಡ ತಕ್ಷಣ ಸಾರಿಗೆ ಸಂಸ್ಥೆಯ ಬಸ್ ಚಾಲಕ ಬಸವರಾಜು ತನ್ನ ಬಲಕ್ಕೆ ಬಸ್ಸನ್ನು ತಿರುಗಿಸಿ ದುರಂತ ತಪ್ಪಿಸಿದ್ದಾರೆ. ಪರಿಣಾಮ ಬಸ್ಸು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಅಪಘಾತದ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.