ಚಿಕ್ಕಬಳ್ಳಾಪುರ: ಕಾರಿಗೆ ಸೈಡ್ ಕೊಡಲಿಲ್ಲ ಎಂದು ತಗಾದೆ ತೆಗೆದ ಆಂಧ್ರ ಮೂಲದ ಯುವಕರ ಗುಂಪು ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆಗೈದು ಗೂಂಡಾಗಿರಿ ನಡೆಸಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ಬಿಸಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆಎಸ್‌ಆರ್‌ಟಿಸಿ ಬಸ್ ನ ಚಾಲಕ ಅಶ್ವತ್ಥರೆಡ್ಡಿ ಹಾಗೂ ನಿರ್ವಾಹಕ ಮಂಜುನಾಥ್ ಸೇರಿದಂತೆ ಬಸ್ ನಲ್ಲೇ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ರಾಜೇಶ್ ಹಲ್ಲೆಗೊಳಗಾದವರು. ಸದ್ಯ ಗಾಯಾಳುಗಳಾದ ಮೂವರನ್ನ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ:
ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗವಾಗಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಗೆ ಆಂಧ್ರದ ಹಿಂದೂಪುರದಿಂದ ಚಿಕ್ಕಬಳ್ಳಾಪುರದ ಕಡೆಗೆ ಆಗಮಿಸುತ್ತಿದ್ದ ಕಾರು ಮುಖಾಮುಖಿಯಾಗಿತ್ತು. ಆದ್ರೆ ಬಿಸಲಹಳ್ಳಿ ಗ್ರಾಮದ ಬಳಿ ರಸ್ತೆ ಮಧ್ಯೆ ಮೋರಿ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ರಸ್ತೆ ಇಕ್ಕಟ್ಟಾಗಿತ್ತು. ಈ ವೇಳೆ ಮೊದಲು ಬಸ್ ಚಾಲಕ ಇಕ್ಕಟ್ಟಾದ ರಸ್ತೆ ಮೂಲಕ ಹಾದು ಬಂದಿದ್ದಾರೆ. ಇದರಿಂದ ಕೆರಳಿದ ಕಾರಿನಲ್ಲಿದ್ದ ಯುವಕರ ಗುಂಪು ಮೊದಲಿಗೆ ಕೆಎಸ್‍ಆರ್‍ಟಿಸಿ ಬಸ್ ಚಾಲಕನ ಜೊತೆ ಯಾಕೆ ಕಾರಿಗೆ ಫಸ್ಟ್ ಸೈಡ್ ಕೊಡಲಿಲ್ಲ ಎಂದು ತಗಾದೆ ತೆಗೆದಿದ್ದಾರೆ. ಈ ವೇಳೆ ಏಕಾಏಕಿ ಚಾಲಕನಿಗೆ ಕಲ್ಲಿನಿಂದ ತಲೆಗೆ ಹೊಡೆದಿದ್ದು, ಬಸ್ಸಿನಿಂದ ಕೆಳಗೆಳೆದುಕೊಂಡು ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಹಲ್ಲೆ ತಡೆಯಲು ಬಂದ ನಿರ್ವಾಹಕ ಮಂಜುನಾಥ್ ಹಾಗೂ ಬಸ್ ನಲ್ಲೇ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ರಾಜೇಶ್ ಮೇಲೂ ಸಹ ಹಲ್ಲೆ ನಡೆಸಿದ್ದಾರೆ. ಮೂರು ಕಾರುಗಳಲ್ಲಿದ್ದ ಯುವಕರು ಹಾಗೂ ಅವರ ಕುಟುಂಬಸ್ಥರು ಎಲ್ಲರೂ ಸೇರಿ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ರೋಸಿ ಹೋದ ಸ್ಥಳೀಯರು ಬಸ್ ನಲ್ಲಿದ್ದ ಕೆಲ ಪ್ರಯಾಣಿಕರು ಯುವಕರಿಗೂ ಥಳಿಸಿದ್ದು, ಯುವಕರ ಒಂದು ಕಾರಿನ ಗಾಜನ್ನೂ ಸಹ ಜಖಂಗೊಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಮಂಚೇನಹಳ್ಳಿ ಪೊಲೀಸರು ಮೂವರು ಯುವಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಯುವಕರು ಆಂಧ್ರದ ಹಿಂದೂಪುರ ಮೂಲದವಾರಾಗಿದ್ದು, ಮೂರು ಕಾರುಗಳ ಮೂಲಕ ಚಿಕ್ಕಬಳ್ಳಾಪುರಕ್ಕೆ ಆಗಮಿಸುತ್ತಿದ್ದರು ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv