ಚಿಕ್ಕೋಡಿ: KSRTC ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೆ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕೋಡಿ ಪಟ್ಟಣದ ಹೊರವಲಯದ ಕೆರೂರ ಕ್ರಾಸ್ ಬಳಿಯ ಚಿಕ್ಕೋಡಿ-ಮಿರಜ ರಾಜ್ಯ ಹೆದ್ದಾರಿಯಲ್ಲಿ ಬಸ್-ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಮೇಲೆಯೇ ಬಸ್ ಎಗರಿದೆ. ಪರಿಣಾಮ ಚಿಕ್ಕೋಡಿಯಿಂದ ಅಂಕಲಿಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಇಬ್ಬರು ಕಾರ್ಮಿಕರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ತಾಕತ್ತಿದ್ದರೆ ನನ್ನನ್ನು ತುಂಡು, ತುಂಡು ಮಾಡಲಿ ನೋಡೋಣ: ಆಂದೋಲಾ ಶ್ರೀ ಕಿಡಿ
ಚಿಕ್ಕೋಡಿ ಪಟ್ಟಣದ ನಿವಾಸಿಗಳಾದ ಶ್ರೀಶೈಲ ಕೋರವಿ(27) ಹಾಗೂ ಸಂತೋಷ್ ಹುಜರೆ(28) ಸ್ಥಳದಲ್ಲೇ ಸಾವನ್ನಪ್ಪಿದ ಕಾರ್ಮಿಕರು. ಅಪಘಾತದ ಬಳಿಕ ಬಸ್ ಬಿಟ್ಟು ಚಾಲಕ ಹಾಗೂ ನಿರ್ವಾಹಕ ಪರಾರಿಯಾಗಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.
ಸ್ಥಳಕ್ಕೆ ಚಿಕ್ಕೋಡಿ ಸಿಪಿಐ ಪಾಟೀಲ್, ಅಂಕಲಿ ಪೊಲೀಸ್ ಠಾಣೆ ಪಿಎಸ್‍ಐ ಭರತ್, ಎನ್.ಎಸ್.ಪರಮಾನಟ್ಟಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಲೆಮಹದೇಶ್ವರ ಜಾತ್ರಾಮಹೋತ್ಸವ – ಪೂರ್ವಸಿದ್ಧತೆಗಳ ಕುರಿತಂತೆ ಸಭೆ ನಡೆಸಿದ ಸೋಮಣ್ಣ