ಚಿಕ್ಕಬಳ್ಳಾಪುರ: ದಾರಿ ಮಧ್ಯೆ ಅಡ್ಡ ಬಂದ ವಾಹನವೊಂದನ್ನು ಅಪಘಾತದಿಂದ ತಪ್ಪಿಸಲು ಹೋಗಿ ಕೆಎಸ್‍ಆರ್ ಟಿಸಿ ಬಸ್ಸೊಂದು ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದ ಅರಣ್ಯಪ್ರದೇಶದಲ್ಲಿ ಪಲ್ಟಿಯಾಗಿದೆ.
ಈ ಬಸ್ ಚಿಂತಾಮಣಿ ಕೆಎಸ್‍ಆರ್ ಟಿಸಿ ಘಟಕಕ್ಕೆ ಸೇರಿದ್ದು, ಇಂದು ಚಿಂತಾಮಣಿಯಿಂದ ಪಾವಗಡಕ್ಕೆ ಬಸ್ಸು ತೆರಳುತ್ತಿದ್ದ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ. ಕಣಿವೆ ಪ್ರದೇಶದ ಅಂಕು ಡೊಂಕಿನ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ವಾಹನವೊಂದನ್ನು ಅಪಘಾತದಿಂದ ತಪ್ಪಿಸಲು ಹೋಗಿ ಬಸ್ ಪಲ್ಟಿಯಾಗಿದೆ. ಆದ್ರೆ ಬಸ್ಸಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಕಣಿವೆ ಪ್ರದೇಶದಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿಯನ್ನು ಕಾರಣಾಂತರಗಳಿಂದ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ರಸ್ತೆ ಅಗಲೀಕರಣ ಕಾಮಗಾರಿಗಾಗಿ ರಸ್ತೆಯ ಒಂದು ಬದಿ ಇದ್ದ ಕಲ್ಲುಗಳನ್ನು ತೆರವುಗೊಳಿಸಲಾಗಿದ್ದು, ಅಳಿದುಳಿದ ಕಲ್ಲುಗಳು ರಸ್ತೆ ಬದಿಯಲ್ಲೆ ಇವೆ. ಇದರಿಂದ ಪದೇ ಪದೇ ಈ ಮಾರ್ಗದಲ್ಲಿ ವಾಹನಗಳ ಓಡಾಟಕ್ಕೆ ಆಡಚಣೆ ಉಂಟಾಗುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ.
ಬಸ್ ಪಲ್ಟಿಯಾದ ಹಿನ್ನಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಇತರೆ ವಾಹನ ಸವಾರರು ಪರದಾಡುವಂತಾಗಿತ್ತು. ಬಳಿಕ ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಗಾಯಾಳುಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಪಲ್ಟಿಯಾದ ಬಸ್ಸನ್ನು ಕ್ರೇನ್ ಮೂಲಕ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.