– ಶಾಂತಕುಮಾರ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರದವರೆಗೆ ಪ್ರಕಟಿಸದಂತೆ ಹೈಕೋರ್ಟ್ (High Court) ಆದೇಶ ನೀಡಿದೆ.
ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದ್ದನ್ನು ಪ್ರಶ್ನಿಸಿ ಎನ್ ಶಾಂತಕುಮಾರ್ (N Shantakumar) ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು. ಈ ವೇಳೆ ನಾಮಪತ್ರ ಹಿಂಪಡೆದವರೂ ಇದರಲ್ಲಿ ಸೇರುತ್ತಾರೆ ಎಂದು ಹೈಕೋರ್ಟ್ ಹೇಳಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ವೆಂಕಿ ಬಣದಲ್ಲಿರುವ ಮಾಜಿ ಆಟಗಾರ್ತಿ ಕಲ್ಪನಾ ವೆಂಕಟಾಚಾರ್ ಕೂಡ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಆದರೆ ಅವರು ನಾಮಪತ್ರ ಹಿಂಪಡೆದಿದ್ದಾರೆ. ಈಗ ಹೈಕೋರ್ಟ್ ಇಬ್ಬರಿಗೂ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ | ಬೆಂಗಳೂರಿನಲ್ಲಿ ಪಂದ್ಯವಿಲ್ಲ – 8 ಮೈದಾನಗಳಲ್ಲಿ ಟೂರ್ನಿ

ನಾಮಪತ್ರ ಹಿಂಪಡೆಯಲು ನ.27 ಕೊನೆ ದಿನವಾಗಿದೆ. ಪತ್ರಿಕೋದ್ಯಮಿ ಕೆ.ಎನ್.ಶಾಂತ್‌ಕುಮಾರ್ ಅವರ ನಾಮಪತ್ರ ತಿರಸ್ಕೃತಗೊಂಡಿರುವ ಕಾರಣ ವೆಂಕಟೇಶ್ ಪ್ರಸಾದ್ ಅವರು ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ ಕೆಎಸ್‌ಸಿಎ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿರಲಿಲ್ಲ. ಪ್ರಸಾದ್ ಅವಿರೋಧ ಆಯ್ಕೆ ಬಗ್ಗೆ ಗುರುವಾರ ಅಧಿಕೃತ ಘೋಷಣೆಯಾಗುವ ನಿರೀಕ್ಷೆ ಇತ್ತು.
ಶಾಂತಕುಮಾರ್ ಪ್ರತಿನಿಧಿಸುವ ಕ್ರಿಕೆಟ್ ಕ್ಲಬ್, ಲೀಗ್‌ನಲ್ಲಿ ಆಡಲು ನೋಂದಣಿ ಮಾಡಿಕೊಳ್ಳುವಾಗ 200 ರೂ. ಸಬ್‌ಸ್ಕ್ರಿಷ್ಷನ್ ಶುಲ್ಕ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕೃತಗೊಳಿಸಿದ್ದರು. ವೆಂಕಿ ಬಣದಿಂದ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದ ಕೆಎಸ್‌ಸಿಎ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಅವರ ನಾಮಪತ್ರ ತಾಂತ್ರಿಕ ಕಾರಣಗಳಿಂದಾಗಿ ತಿರಸ್ಕೃತಗೊಂಡಿದೆ.

