ಬೆಂಗಳೂರು: ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹಾಗೂ ಕೆ.ಎಸ್ ಈಶ್ವರಪ್ಪ ಮಧ್ಯೆ ವರ್ಗಾವಣೆ ವಾರ್ ಶುರುವಾಗಿದೆ. ಸಚಿವ ಕೆ.ಎಸ್ ಈಶ್ವರಪ್ಪ ಅಳಿಯನಿಗಾಗಿ ಎಂಟಿಬಿ ಆಪ್ತ ಅಧಿಕಾರಿಯನ್ನು ದಿಢೀರ್ ಎತ್ತಂಗಡಿ ಮಾಡಲಾಗಿದೆ.
ಈಶ್ವರಪ್ಪಗೆ ಕೆ.ಸಿ ಶ್ರೀನಿವಾಸ್ ಸಂಬಂಧದಲ್ಲಿ ಅಳಿಯ ಆಗಬೇಕು. ಹೀಗಾಗಿ ತಮ್ಮ ಅಳಿಯನನ್ನು ಪ್ರಭಾವಿ ಹುದ್ದೆಗೆ ವರ್ಗ ಮಾಡಿಸಿದ್ದಾರೆ. ಕೆ.ಸಿ ಶ್ರೀನಿವಾಸ್ ಅವರನ್ನು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಆಗಿ ವರ್ಗ ಮಾಡಲಾಗಿದೆ. ಈ ಮೂಲಕ ವರ್ಗಾವಣೆಯಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹಸ್ತಕ್ಷೇಪ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕೆ ಸಿ ಶ್ರೀನಿವಾಸ್, ಈ ಮೊದಲು ನಗರಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯಪಾಲಕ ಎಂಜಿನಿಯರ್ ಆಗಿದ್ದರು.
Advertisement
Advertisement
ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ಲೋಕೋಪಯೋಗಿ ಇಲಾಖೆಯ ಬೆಂಗಳೂರು ವಿಭಾಗಕ್ಕೆ ತಮ್ಮ ಆಪ್ತ ಪದ್ಮನಾಭ್ ಅವರನ್ನು ನೇಮಿಸಬೇಕೆಂದು ಪಟ್ಟು ಹಿಡಿದಿದ್ದರು. ಅಲ್ಲದೇ ಈ ಹಿಂದೆ ತಮ್ಮ ಆಪ್ತ ಪದ್ಮನಾಭ್ ವರ್ಗಾವಣೆ ಆದಾಗ ಪಟ್ಟು ಹಿಡಿದು ಅದೇ ಜಾಗದಲ್ಲಿ ಮುಂದುವರಿಯುವಂತೆ ಮಾಡಿದ್ದರು. ಆದರೆ ಈಗ ಎಂಟಿಬಿ ಆಪ್ತನನ್ನ ಎತ್ತಂಗಡಿ ಮಾಡಿ, ಆ ಜಾಗಕ್ಕೆ ಈಶ್ವರಪ್ಪ ಅಳಿಯನನ್ನು ನೇಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ವಿರುದ್ಧ ಎಂಟಿಬಿ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.