ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಜೆಡಿಎಸ್ ರಾಜಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಅವರು ನಮಗೆ ರಾಷ್ಟ್ರದ್ರೋಹಿಗಳ (Muslim Votes) ವೋಟು ಬೇಡ ಎಂದು ಹೇಳಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಿಎಫ್‌ಐ (PFI) ಬ್ಯಾನ್ ಮಾಡಿರುವುದನ್ನು ರಾಷ್ಟ್ರಭಕ್ತರೆಲ್ಲರೂ ಸ್ವಾಗತಿಸಿದ್ದಾರೆ. ಇದನ್ನು ವಿರೋಧ ಮಾಡುತ್ತಿರುವುದು ಸಿದ್ದರಾಮಯ್ಯ ಹಾಗೂ ಇಬ್ರಾಹಿಂ. ಅವರು ಬೇಕಿದ್ದರೆ ನಮಗೆ ಮುಸ್ಲಿಮರ ವೋಟು ಮಾತ್ರಬೇಕು. ಅದರಲ್ಲೂ ರಾಷ್ಟ್ರದ್ರೋಹಿಗಳ ವೋಟು ಇದ್ದರೇ ಸಾಕು, ಯಾವುದೇ ಕಾರಣಕ್ಕೂ ಹಿಂದೂಗಳ ವೋಟು ನಮಗೆ ಬೇಡ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಸ್ವಾತಂತ್ರ‍್ಯ ಪೂರ್ವದಲ್ಲಿ ಇದ್ದಂತಹ ಕಾಂಗ್ರೆಸ್ (Congress) ನಾಯಕರು ನಿಜವಾದ ರಾಷ್ಟ್ರಭಕ್ತರು. ಅವರು ಸ್ಪಷ್ಟವಾಗಿ ಗುರುತಿಸಿ ಬೆಂಬಲ ಕೊಡುತ್ತಿದ್ದರು. ಆದರೆ ಇತ್ತೀಚೆಗೆ ಕಾಂಗ್ರೆಸ್‌ನಲ್ಲಿ ರಾಷ್ಟ್ರದ್ರೋಹಿಗಳನ್ನು ಬೆಂಬಲಿಸುವ ಕೆಲಸ ಆಗ್ತಿದೆ. ಪಿಎಫ್‌ಐ ಬಾಂಬ್ ತಯಾರಿಕೆ ಮಾಡುತ್ತಿರುವುದು, ಕೊಲೆ, ಸುಲಿಗೆ, ವಿದೇಶದಿಂದ ಹಣ ಪಡೆಯುತ್ತಿರುವುದು ಹಾಗೂ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ಸಾಬೀತಾದ ಮೇಲೆಯೇ ದಾಖಲೆ ಸಮೇತ ಬ್ಯಾನ್ ಮಾಡಿದ್ದಾರೆ. ಇದನ್ನು ಇಡೀ ದೇಶವೇ ಸ್ವಾಗತ ಮಾಡಿದೆ. ಆದರೆ ಸಿದ್ದರಾಮಯ್ಯ, ಸಿಎಂ ಇಬ್ರಾಹಿಂ ಮಾತ್ರ ವಿರೋಧ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮೋದಿ ಆರ್‌ಎಸ್‌ಎಸ್ ಪ್ರಾಡಕ್ಟ್: ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಕೂಡ ಆರ್‌ಎಸ್‌ಎಸ್ (RSS)ನ ಪ್ರಾಡಕ್ಟ್. ಅನೇಕ ಸಮಾಜಮುಖಿ ಚಟುವಟಿಕೆಗಳನ್ನು ಆರ್‌ಎಸ್‌ಎಸ್ ಮಾಡುತ್ತಿದ್ದು, ದೇಶ-ವಿದೇಶಗಳು ಬೆಂಬಲ ಕೊಡುತ್ತಿವೆ. ಇದು ನಮಗೆ ಅಧಿಕಾರಕ್ಕೆ ತೊಂದರೆ ಕೊಡುತ್ತಿದೆ ಎಂಬ ಒಂದೇ ಕಾರಣಕ್ಕೆ ಸಿದ್ದರಾಮಯ್ಯ, ಇಬ್ರಾಹಿಂ ವಿರೋಧ ಮಾಡುತ್ತಿದ್ದಾರೆ. ಈ ಸಿದ್ದರಾಮಯ್ಯ ಯಾವ ಲೆಕ್ಕ ನಮಗೆ, ಅವರ ಮಾತಿಗೆ ನಾವೇನು ತಲೆ ಕೆಡಿಸಿಕೊಂಡಿಲ್ಲ ಎಂದಿದ್ದಾರೆ.
ಆರ್‌ಎಸ್‌ಎಸ್ (RSS) ಬಗ್ಗೆ ಏನು ಕಲ್ಪನೆ ಇಲ್ಲದಂತಹ ದಡ್ಡ ಶಿಕಾಮಣಿಗಳು ಅದರ ಬಗ್ಗೆ ಮಾತನಾಡುತ್ತಾರೆ. ಇಂದು ದೇಶದ ಮೂಲೆ ಮೂಲೆಯಲ್ಲೂ ಆರ್‌ಎಸ್‌ಎಸ್ ತಯಾರಾಗುತ್ತಿದೆ. ದೇಶ ವಿದೇಶಗಳಲ್ಲೂ ಹರಡಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಪಿಎಫ್‌ಐನಿಂದ 22 ಹಿಂದೂ ಯುವಕರ ಕೊಲೆಗಳಾಯ್ತು. ಕೊಲೆಗಡುಕರನ್ನು ಇವರೇ ಜೈಲಿಗೆ ಕಳುಹಿಸಿದ್ದರು. ಅದಾದ ಬಳಿಕ ಪಿಎಫ್‌ಐ ಸಂಘಟನೆಗಳು ಜೋರಾದ ಬಳಿಕ ಮತಕ್ಕಾಗಿ ಕೇಸ್‌ಗಳನ್ನು ವಾಪಸ್ ಪಡೆದುಕೊಂಡರು. ಕೊಲೆಯಾದ ಹಿಂದೂಗಳಲ್ಲೂ ಹಿಂದುಳಿದವರು, ಮುಂದುವರಿದವರು ಎಂದು ವಿಭಾಗ ಮಾಡಿ ಕುತಂತ್ರ ರಾಜಕಾರಣವನ್ನು ಕಾಂಗ್ರೆಸ್‌ನವರು ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನಾಯಕರು ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ಜೈಲಿಗೆ ಹೋಗಿದ್ರು. ಈಗ ತಿಹಾರ್ ಜೈಲಿಗೆ ಹೋಗಿರುವ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು, ಬಾರ್‌ನಲ್ಲಿ ಬಡಿದಾಡಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದ ಗೂಂಡಾ ನಲಪಾಡ್, ಯೂತ್ ಕಾಂಗ್ರೆಸ್ ಅಧ್ಯಕ್ಷ. ಇಂತಹವರ ಕೈಯಲ್ಲಿ ಕಾಂಗ್ರೆಸ್ ಇದೆ. ಕಳ್ಳರನ್ನು ಕೇಳಿ ಕೋರ್ಟ್‌ನಲ್ಲಿ ನೋಟಿಸ್ ಕೊಡಲ್ಲ. ಯಾವಾಗ ನೋಟಿಸ್ ಕೊಡ್ತಾರೆ ಆ ಸಂದರ್ಭದಲ್ಲಿ ವಿಚಾರಣೆಗೆ ಬರಬೇಕೆಂಬುದು ನಿಯಮ. ಇನ್ಮುಂದೆ ಡಿ.ಕೆ.ಶಿವಕುಮಾರ್ ಅವರನ್ನು ಕೇಳಿ ರೇಡ್ ಮಾಡೋದು, ಕೋರ್ಟ್ ಕರೆಯುವ ಹಾಗೇ ಸಂವಿಧಾನ ತಿದ್ದುಪಡಿ ಮಾಡಿ ಕರೆಯಬೇಕಾಗುತ್ತೆ. ನನ್ನ ಮೇಲೆ ಒಂದೇ ಒಂದು ಕೇಸ್ ಇಲ್ಲ. ಮೊನ್ನೆ ಒಂದು ಕೇಸ್ ಇದ್ದಿದ್ದು ಕ್ವಿಟ್ ಆಯ್ತು. ಕ್ಲೀನ್ ಚಿಟ್ ಎಂದು ಡಿಪಾರ್ಟ್ಮೆಂಟ್ ಕೊಟ್ಟೂ ಆಯ್ತು. ಯಡಿಯೂರಪ್ಪ ಅವರ ಮೇಲೆ ಕೇಸ್ ಇತ್ತು. ಜೈಲಿಗೆ ಹೋಗಿ ಬಂದಿದ್ದರು. ಆ ಕೇಸ್‌ನಿಂದ ಮುಕ್ತರಾಗಿ ಬಂದಿದ್ದಾರೆ. ಇವತ್ತು ಬಿಜೆಪಿ ನಾಯಕರ ಮೇಲೆ ಒಂದೇ ಒಂದು ಕೇಸ್ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಸತ್ತು ಹೋಗಿದೆ. ಕರ್ನಾಟಕದಲ್ಲಿ ಎಲ್ಲೋ ಕುಟುಕುಟು ಅಂತ ಉಸಿರಾಡುತ್ತಿದೆ. ಆವತ್ತು ಗಾಂಧೀಜಿ ಕಾಂಗ್ರೆಸ್‌ನ್ನು ವಿಸರ್ಜನೆ ಮಾಡಿ ಎಂದಿದ್ದರು. ಆದರಿಂದು ಅವರವರೇ ವಿಸರ್ಜನೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆ ವೇಳೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಿಜೆಪಿ ಎರಡು ಸೀಟು ಗೆಲ್ಲಲ್ಲ ಅಂದಿದ್ರು. ಆದರೆ ಅವರು ಹೇಳಿದ ಭವಿಷ್ಯವೆಲ್ಲವೂ ಸುಳ್ಳೇ ಆಗಿವೆ ಎಂದು ಕುಟುಕಿದ್ದಾರೆ.