– ಸಿದ್ದರಾಮಯ್ಯಗೆ ಈಶ್ವರಪ್ಪ ಸವಾಲು
ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಕ್ರಿಮಿನಲ್, ಅದರಲ್ಲಿ ಯಾವುದೇ ಅನುಮಾನ ಬೇಡ. ಅವರಿಗೆ ಕುಂಕುಮದ ಮಹತ್ವ ಗೊತ್ತಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಿಲಕ ಇಟ್ಟುಕೊಳ್ಳುತ್ತಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬದಲ್ಲಿ ಎಲ್ಲರೂ ತಿಲಕ ಇಟ್ಟುಕೊಳ್ಳುತ್ತಾರೆ. ಹಾಗಾದರೆ ಅವರೆಲ್ಲರೂ ಕ್ರಿಮಿನಲ್‍ಗಳಾ? ಕುಂಕುಮ ಇಟ್ಟುಕೊಳ್ಳುವವರನ್ನು ಕ್ರಿಮಿನಲ್ಸ್ ಗೆ ಹೋಲಿಸಬಾರದು. ಕುಂಕುಮಕ್ಕೆ ಪಾವಿತ್ರ್ಯತೆ ಇದೆ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
Advertisement
Advertisement
ದೇವೇಗೌಡ ಕುಟುಂಬದ ವಿರುದ್ಧ ವ್ಯಂಗ್ಯ:
ಕುಟುಂಬ ರಾಜಕಾರಣ ವಿಚಾರವಾಗಿ ಮಾತನಾಡಿದ ಅವರು, ದೇವೇಗೌಡ ಅವರನ್ನು ಒಕ್ಕಲಿಗ ನಾಯಕರೆಂದು ಒಪ್ಪಿಕೊಂಡಿದ್ದೆವು. ಆದರೆ ಈಗ ಕುಟುಂಬ ರಾಜಕಾರಣ ನಡೆಸಿದ್ದಾರೆ. ನನಗೆ 28 ಜನ ಮಕ್ಕಲಿಲ್ಲವೆಂದು ದೇವೇಗೌಡರು ಕೊರಗುತ್ತಿದ್ದಾರೆ. ಒಂದು ವೇಳೆ ಅಷ್ಟು ಜನ ಮಕ್ಕಳಿದ್ದಿದ್ದರೆ ರಾಜ್ಯದ 28 ಕ್ಷೇತ್ರಗಳಿಗೂ ತಮ್ಮ ಮಕ್ಕಳನ್ನೇ ನಿಲ್ಲಿಸುತ್ತಿದ್ದರು. ಇಲ್ಲವೆ 14 ಮಕ್ಕಳಿದ್ದರೆ 14 ಜನ ಸೊಸೆಯಂದಿರನ್ನು ಸೇರಿಸಿ ಎಲ್ಲಾ ಕ್ಷೇತ್ರಗಳಿಂದ ಚುನಾವಣೆಗೆ ನಿಲ್ಲಿಸುತ್ತಿದ್ದರು ಎಂದು ವ್ಯಂಗ್ಯವಾಡಿದರು.
Advertisement
ಸಿದ್ದರಾಮಯ್ಯ ತಮ್ಮ ಅಧಿಕಾರ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಕೊಲೆಗಡಕರಿಗೆ ರಕ್ಷಣೆ ಕೊಟ್ಟಿದ್ದರು. ಸಿಎಂ ಸ್ಥಾನ ಹೋದ ಮೇಲೆ ಕನಸಿನಲ್ಲಿಯೂ ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಎಲ್ಲಿ ನೋಡಿದರೂ ಅವರಿಗೆ ಕುಂಕುಮ ಕಾಣುತ್ತಿದೆ ಎಂದು ಕುಟುಕಿದರು.
Advertisement
ರೇವಣ್ಣ ಕ್ಷಮೆ ಕೇಳಬೇಕು:
ಸುಮಲತಾ ಅಂಬರೀಶ್ ಅವರು ನನಗೆ ಸಹೋದರಿ ಸಮಾನ. ಅವರಿಗೆ ಅಪಮಾನ ಮಾಡಿರುವ ಲೋಕೋಪಯೋಗಿ ಸಚಿವ ರೇವಣ್ಣ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ತೆನೆ ಹೊತ್ತ ಮಹಿಳೆಯ ಚಿಹ್ನೆ ಇಟ್ಟುಕೊಳ್ಳುವ ಹಕ್ಕು ಜೆಡಿಎಸ್‍ಗಿಲ್ಲ. ಸುಮಲತಾ ಅವರು ಬಿಜೆಪಿ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ. ಆದರೆ ಪಕ್ಷಕ್ಕೆ ಬಂದರೆ ಸ್ವಾಗತ. ಅಭ್ಯರ್ಥಿ ಯಾರೆಂದು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ:
ಈಶ್ವರಪ್ಪ ಬಾಗಲಕೋಟೆಯಿಂದ ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ನಿಲ್ಲಿಸಿ ಸೋಲಿಸುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ವಿರುದ್ಧ ಗರಂ ಆದರು. ಲೋಕಸಭಾ ಚುನಾವಣೆ ಸ್ಪರ್ಧೆಯಲ್ಲಿ ನನಗೆ ಆಸಕ್ತಿ ಇಲ್ಲ. ಬಾಗಲಕೋಟೆ ಬಿಜೆಪಿ ಭದ್ರಕೋಟೆ. ತಾಕತ್ ಇದ್ದರೆ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ನಿಲ್ಲಲಿ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ನಾನು ಕೂಡ ಕೊಡುತ್ತೇನೆ. ಬಾದಾಮಿಯಲ್ಲಿ ಮತ್ತೆ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ. ನಾನು ಶಿವಮೊಗ್ಗದಿಂದ ಸ್ಪರ್ಧೆ ಮಾಡುತ್ತೇನೆ. ಬಾದಾಮಿಯಲ್ಲಿ ಸಿದ್ದರಾಮಯ್ಯ ಮತ್ತೆ ಗೆದ್ದರೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ. ಒಂದು ವೇಳೆ ನಾನು ಶಿವಮೊಗ್ಗದಲ್ಲಿ ಗೆದ್ದರೆ ಅವರು ರಾಜಕೀಯ ಸನ್ಯಾಸ ಪಡೆಯುತ್ತಾರಾ ಎಂದು ಸವಾಲು ಹಾಕಿದರು.
ರಾಹುಲ್‍ಗೆ ಕಿಚಾಯಿಸಿದ್ರು:
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದಲ್ಲೆಲ್ಲ ಕಾಂಗ್ರೆಸ್ ನೆಗೆದು ಬಿದ್ದಿದೆ. ರಾಹುಲ್ ದಯವಿಟ್ಟು ಬಾಗಲಕೋಟೆಗೂ ಬರಲಿ. ಇಲ್ಲಿ ನಾನು ಉಸ್ತುವಾರಿ ಇದ್ದೇನೆ. ರಾಹುಲ್ ಗಾಂಧಿ ಅವರು ಬಾಗಲಕೋಟೆಗೆ ಬಂದು ಹೋದರೆ ಬಿಜೆಪಿ ಮತ್ತೆ ಗೆಲ್ಲಲು ಅನುಕೂಲ ಆಗುತ್ತದೆ ಎಂದು ಕಿಚಾಯಿಸಿದರು.
ಸಿದ್ದರಾಮಯ್ಯ ಬಾದಾಮಿ ಜನರ ಕೈಗೆ ಸಿಗುತ್ತಿಲ್ಲ. ಅವರ ಕಚೇರಿಗೆ ಯಾವಾಗಲೂ ಬೀಗ ಹಾಕಿರುತ್ತದೆ. ಕಚೇರಿಯಲ್ಲಿ ಒಬ್ಬ ಪಿಎನನ್ನು ಇಟ್ಟು ಜನರ ಸಮಸ್ಯೆಗಳ ಅರ್ಜಿ ಸ್ವೀಕರಿಸಬೇಕಿತ್ತು. ಆದರೆ ಮಾಜಿ ಸಿಎಂ ಕಚೇರಿಗೆ ಬಂದಾಗ ಮಾತ್ರ ಬೀಗ ತೆಗೆಯುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಕಾಂಗ್ರೆಸ್ ನಿರ್ಣಾಮವಾಗಿದೆ. 2019ರ ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದಲ್ಲೂ ಕಾಂಗ್ರೆಸ್ ನಿರ್ಣಾಮವಾಗುತ್ತದೆ. ದೋಸ್ತಿ ಸರ್ಕಾರವೂ ಉಳಿಯಲ್ಲ. ಸಿದ್ದರಾಮಯ್ಯ ಧೋರಣೆಯಿಂದ ಪಕ್ಷಕ್ಕೆ ಇಂತಹ ಗತಿ ಬಂದಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಬಂಡುಕೋರರ ನಾಯಕ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv