Chamarajanagar
ಮೋದಿಯನ್ನು ಈ ಪ್ರಪಂಚದಲ್ಲಿ ಇಬ್ಬರು ಮಾತ್ರ ಒಪ್ಪಲ್ಲ: ಈಶ್ವರಪ್ಪ

– ಒಬ್ರು ಸಿದ್ದರಾಮಯ್ಯ, ಮತ್ತೊಂದು ಪಾಕಿಸ್ತಾನ
ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ವಿಶ್ವವೇ ಒಪ್ಪಿದರೂ ಸಿದ್ದರಾಮಯ್ಯ ಮತ್ತು ಪಾಕಿಸ್ತಾನ ಮಾತ್ರ ಒಪ್ಪಲ್ಲ ಎಂದು ಬಿಜೆಪಿ ನಾಯಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಈ ರೀತಿಯಾಗಿ ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಈಶ್ವರಪ್ಪ, ಮೋದಿ ಆಡಳಿತ ವೈಖರಿಯನ್ನು ಎಲ್ಲರೂ ಒಪ್ಪಿದ್ದಾರೆ. ಬೇಕಾದರೆ ಕಾಂಗ್ರೆಸ್ ನವರೂ ಒಪ್ಪುತ್ತಾರೆ. ಆದರೆ ಸಿದ್ದರಾಮಯ್ಯ ಮತ್ತು ಪಾಕಿಸ್ತಾನ ಒಪ್ಪಿಕೊಳ್ಳಲು ಸಿದ್ದರಿಲ್ಲ. ಜೆಡಿಎಸ್ ಕಾಂಗ್ರೆಸ್ ಶಾಸಕರನ್ನು ನಾವು ಸೆಳೆಯುವ ಪ್ರಯತ್ನ ಮಾಡುವುದಿಲ್ಲ. ಬದಲಾಗಿ ಸಮ್ಮಿಶ್ರ ಸರ್ಕಾರ ಇನ್ನು ಆರು ತಿಂಗಳಲ್ಲಿ ತಾನಾಗಿಯೇ ಬಿದ್ದುಹೋಗಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನ ಒಂದು ದೊಡ್ಡ ಗುಂಪೇ ಬಿಜೆಪಿಗೆ ಬರಲಿದೆ. ಬಿಜೆಪಿ ಶಾಸಕರು ಹುಲಿಗಳಿದ್ದಂತೆ, ಯಾವುದೇ ಕಾರಣಕ್ಕೆ ಬೇರೆ ಪ್ರಾಣಿಗಳಂತೆ ಓಡಿಹೋಗುವುದಿಲ್ಲ ಎಂದರು.
ಸಮ್ಮಿಶ್ರ ಸರ್ಕಾರ ಜನಸಾಮಾನ್ಯರಿಗೆ ಭಾರ ಆಗಿದೆ. ಇತಿಹಾಸದಲ್ಲಿ ಇಷ್ಟೊಂದು ಭ್ರಷ್ಟಾಚಾರ ಎಂದೂ ನೋಡಿರಲಿಲ್ಲ. ಸಿಕ್ಕ ಸಮಯದಲ್ಲಿ ಬಂದಷ್ಟು ಬಾಚಿಕೊಂಡು ಹೋಗುವ ಮನಸ್ಥಿತಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರಿದ್ದಾರೆ. ಜೆಡಿಎಸ್ ಗೆ ಬೆಂಬಲ ನೀಡುವ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ನಿರ್ನಾಮವಾಗುವ ಪರಿಸ್ಥಿತಿಯನ್ನ ತಂದುಕೊಂಡಿದೆ ಎಂದು ಹೇಳಿದರು.
ರಾಜ್ಯದಲ್ಲಿ ಇಂದಿನಿಂದ ಬಿಜೆಪಿ ನಾಯಕರ ಪ್ರವಾಸ ಆರಂಭವಾಗಿದೆ. ಮೈಸೂರು ಭಾಗದ ನೇತೃತ್ವವಹಿಸಿರುವ ಕೆ.ಎಸ್. ಈಶ್ವರಪ್ಪನವರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಈಡುಗಾಯಿ ಹೊಡೆಯುವ ಮೂಲಕ ಅಧಿಕೃತವಾಗಿ ಪ್ರವಾಸ ಆರಂಭಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲೇ ವರ್ಗಾವಣೆಯಲ್ಲಿ ಇಷ್ಟೊಂದು ಭ್ರಷ್ಟಾಚಾರ ನಡೆದಿರಲಿಲ್ಲ. ಮಂತ್ರಿಗಳು ವರ್ಗಾವಣೆಯ ಕಮೀಷನ್ ಏಜೆಂಟ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಾಮುಂಡಿ ಸನ್ನಿಧಾನದಲ್ಲಿ ನಿಂತು ನಾನು ಈ ಮಾತನ್ನು ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ. ವರ್ಗಾವಣೆಯ ವಿಚಾರದಲ್ಲಿ ಸಿಎಂ ಕಣ್ಮುಚ್ಚಿ ಕುಳಿತು ಕೊಂಡಿರುವುದು ಒಳ್ಳೆಯದಲ್ಲ. ಎಲ್ಲಾ ಹಂತದ ಅಧಿಕಾರಿಗಳ ವರ್ಗಾವಣೆಗೆ ಹಣ ಪಡೆಯಲಾಗುತ್ತಿದೆ. ಹೀಗಾಗಿ ಅಧಿಕಾರಿಗಳಿಗೆ ಯಾವ ಕ್ಷಣದಲ್ಲಿ ಈ ಸರ್ಕಾರ ಬೀಳುತ್ತೋ, ಯಾವ ಕ್ಷಣದಲ್ಲಿ ನಮ್ಮ ವರ್ಗಾವಣೆ ಆಗುತ್ತೋ ಎಂಬ ಆತಂಕದಲ್ಲಿದ್ದಾರೆ ಎಂದು ಆರೋಪಿಸಿದ್ದರು.
ಕಾಂಗ್ರೆಸ್ ಶಾಸಕರ ಬಗ್ಗೆ ಅವರ ಅಧ್ಯಕ್ಷರಿಗೆ ನಂಬಿಕೆ ಇಲ್ಲ. ಇಂತಹ ಸರ್ಕಾರ ಹೇಗೆ ಉಳಿಯುತ್ತೆ. ಕಾಂಗ್ರೆಸ್ ಶಾಸಕರು ಮಾರಾಟದ ವಸ್ತುಗಳಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹಾಗೂ ಡಿಕೆಶಿ ಹೇಳುತ್ತಿದ್ದಾರೆ. ಇಷ್ಟರ ಮಟ್ಟಿಗೆ ರಾಜ್ಯದ ಜೆಡಿಎಸ್ – ಕಾಂಗ್ರೆಸ್ ಶಾಸಕರು ದುರ್ಬಲರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews
