ಉಡುಪಿ: ಮುಸಲ್ಮಾನರು ಹಲಾಲ್ ಮಾಡುವುದಾದರೆ ಮಾಡಲಿ. ಹಿಂದೂಗಳು ಜಟ್ಕಾ ಮಾಡುವುದಾದರೆ ಮಾಡಿಕೊಂಡು ಹೋಗಲಿ, ಅವರವರು ಅವರವರ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ದೇಶದಲ್ಲೇ ಪ್ರಪ್ರಥಮ ಅತಿದೊಡ್ಡ ಘನ ತ್ಯಾಜ್ಯ ಸಂಸ್ಕರಣ ಘಟಕ ಉದ್ಘಾಟನೆ ಮಾಡಿ, ಮಾಧ್ಯಮಗಳ ಜೊತೆ ಮಾತನಾಡಿ, ಮುಸಲ್ಮಾನರು ನಮ್ಮ ಮನೆಗೆ ಬಂದು ಏನು ಒತ್ತಡ ಹಾಕುವುದಿಲ್ಲ. ನಾವು ಯಾರೂ ಮುಸಲ್ಮಾನರ ಮನೆಗೆ ಹೋಗಿ ಒತ್ತಡ ಹಾಕುವುದಿಲ್ಲ. ಹಲಾಲ್ ವಿಷಯದಲ್ಲಿ ಸಮಾಜವನ್ನು ಒಡೆಯುವ ದಿಕ್ಕಿನಲ್ಲಿ ಕುತಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಹಲಾಲ್, ಜಟ್ಕಾ ಇಂಥದ್ದನ್ನೆಲ್ಲ ಕೆಲವು ವ್ಯಕ್ತಿಗಳು, ಪಕ್ಷಗಳು ಸೃಷ್ಟಿ ಮಾಡಿದ್ದಾರೆ. ಕೆಲ ವ್ಯಕ್ತಿಗಳು ಆಡುತ್ತಿರುವ ಆಟ ಇದು. ಕರ್ನಾಟಕದಲ್ಲಿ ಜನ ಅನುಭವಿಸುತ್ತಿದ್ದಾರೆ. ಯಾರು ಯಾವುದನ್ನು ಪೂಜೆ ಮಾಡುತ್ತಾರೋ ಅದನ್ನು ಮಾಡಿಕೊಳ್ಳಬೇಕು. ಅವರವರು ಅವರ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಹೇಳಿದರು. ಇದನ್ನೂ ಓದಿ: ಹಲಾಲ್ ಕಟ್ ಮಾಂಸ ಖರೀದಿ ಉತ್ತೇಜಿಸಲು ಅಭಿಯಾನ: ದೇವನೂರ ಮಹಾದೇವ ನೇತೃತ್ವ
ಈ ತರಹದ ವಿಚಾರದಲ್ಲಿ ನಾನು ರಾಜಕಾರಣ ಮಾಡಲು ಇಷ್ಟಪಡಲ್ಲ. ಚುನಾವಣೆ ಬಂದಾಗ ಒಬ್ಬರಿಗೊಬ್ಬರು ಬಹಿರಂಗವಾಗಿ ತೊಡೆತಟ್ಟೋಣ. ಚುನಾವಣೆ ಬಂದಾಗ ನಾನೇನು ಮಾಡಿದ್ದೇನೆ, ನೀವ್ ಏನ್ ಮಾಡಿದ್ದೀರಿ ಎಂದು ಜನ ಮುಂದೆ ಇಡೋಣ ಎಂದು ಹೇಳಿದರು.
ಯುಗಾದಿ ದಿನ ನಾನು ಮಾಂಸ ತಿನ್ನಲ್ಲ. ಭಾನುವಾರ ನನ್ನ ಮನೆದೇವರು. ಅವತ್ತು ಕೂಡ ಮಾಂಸ ತಿನ್ನಲ್ಲ. ಸೋಮವಾರ ಮಾಂಸ ತಿನ್ನುವ ಅಭ್ಯಾಸ ಇಲ್ಲ. ಆದ್ರೆ ಮಂಗಳವಾರ ಮಾಂಸ ಬಿಡುವುದೇ ಇಲ್ಲ ಅಂತ ಹಾಸ್ಯಚಟಾಕಿ ಹಾರಿಸಿದರು. ಇದನ್ನೂ ಓದಿ: ಜಟ್ಕಾ ಕಟ್ ಮಟನ್ ಅಂಗಡಿಗಳ ಮುಂದೆ ಕೇಸರಿ ಧ್ವಜ