ಶಿವಮೊಗ್ಗ: ಜಿಲ್ಲೆಯ ಪೊಲೀಸ್ ಇಲಾಖೆ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ. ನಗರದಲ್ಲಿ ಗೂಂಡಾಗಳಿಗೆ, ಗಲಾಟೆ ಮಾಡುವವರಿಗೆ ಪೊಲೀಸರ ಭಯ ಇಲ್ಲದಂತಹ ವಾತಾವರಣ ಇದೆ. ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ. ಆದರೆ ಹಲ್ಲೆಕೋರರ ಬಂಧನವಾಗಿಲ್ಲ. ಪೊಲೀಸರು ಏನು ದನ ಕಾಯುತ್ತಿದ್ದಾರಾ? ಎಂದು ಸಚಿವ ಕೆ.ಎಸ್.ಈಶ್ವರಪ್ಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಅವರನ್ನು ಪ್ರಶ್ನಿಸಿದರು.
ನಗರದ ಜೆ.ಪಿ.ನಗರದಲ್ಲಿ ಕಳೆದ ಮೂರು ದಿನದ ಹಿಂದೆ ಕಸ ಸಂಗ್ರಹಿಸಲು ತೆರಳಿದ್ದ ಪೌರ ಕಾರ್ಮಿಕರ ಮೇಲೆ ಐದಾರು ಮಂದಿ ಹಲ್ಲೆ ನಡೆಸಿದ್ದ ಘಟನೆ ನಡೆದಿತ್ತು. ಘಟನೆಯಿಂದಾಗಿ ಇಬ್ಬರು ಪೌರ ಕಾರ್ಮಿಕರು ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಪೌರ ಕಾರ್ಮಿಕರ ಆರೋಗ್ಯ ವಿಚಾರಿಸಲು ಸಚಿವ ಈಶ್ವರಪ್ಪ ಆಸ್ಪತ್ರೆಗೆ ತೆರಳಿದ್ದರು. ಇದನ್ನೂ ಓದಿ: ನೆಲಮಂಗಲದಲ್ಲಿ ಮಂಗಳಮುಖಿ ಆತ್ಮಹತ್ಯೆ – ಪೊಲೀಸರಿಂದ ತನಿಖೆ
ಘಟನೆ ಬಗ್ಗೆ ಮಾಹಿತಿ ಪಡೆಯಲು ಆಸ್ಪತ್ರೆಯಿಂದಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಅವರಿಗೆ ಕರೆ ಮಾಡಿದ ಅವರು, ಘಟನೆ ನಡೆದು ಮೂರು ದಿನವಾಗಿದೆ. ಐದಾರು ಮಂದಿ ಸೇರಿಕೊಂಡು ಗಾಂಜಾ ಸೇವಿಸಿದ ಮತ್ತಿನಲ್ಲಿ ಹಲ್ಲೆ ನಡೆಸಿದ್ದಾರೆ. ಆದರೆ ಇದುವರೆಗೆ ಇಬ್ಬರು ಆರೋಪಿಗಳನ್ನು ಮಾತ್ರ ವಶಕ್ಕೆ ಪಡೆದಿದ್ದೀರಿ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಲ್ಲೆ ನಡೆದಿದೆ ಅಂದರೆ ಏನು ಅರ್ಥ. ನಾಳೆ ಇದನ್ನೇ ಮುಂದಿಟ್ಟುಕೊಂಡು ಪೌರ ಕಾರ್ಮಿಕರು ಕಸ ಸಂಗ್ರಹಿಸಲ್ಲ ಎಂದು ಕುಳಿತರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದು ಮೂರು ದಿನವಾಗಿದೆ. ಐದಾರು ಮಂದಿ ವಿರುದ್ಧ ದೂರು ದಾಖಲಾಗಿದೆ. ಆದರೆ ಆ ಠಾಣೆ ಪೊಲೀಸರು ಇಬ್ಬರನ್ನು ಮಾತ್ರ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಏನು ದನ ಕಾಯುತ್ತಿದ್ದಾರಾ ಎಂದು ಪ್ರಶ್ನಿಸಿದರು. ನಾನು ಸಂಜೆ ನಿಮ್ಮ ಕಚೇರಿಗೆ ಭೇಟಿ ನೀಡುತ್ತೇನೆ. ಅಷ್ಟರೊಳಗೆ ಉಳಿದ ಆರೋಪಿಗಳ ಬಂಧನ ಆಗಬೇಕು. ಇಲ್ಲದಿದ್ದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ರಾಜ್ ಕುಟುಂಬದಲ್ಲಿ 20-23 ವರ್ಷಕ್ಕೆ ಮತ್ತೊಬ್ಬ ಸೂಪರ್ ಸ್ಟಾರ್ ಹುಟ್ಟಿಬರ್ತಾನೆ: ಜಗ್ಗೇಶ್