ಬಳ್ಳಾರಿ: ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಕೆ ಎಸ್ ಈಶ್ವರಪ್ಪ ಇಂದು ಬೆಳಗ್ಗೆ ಸಂಡೂರಿನ ಕುಮಾರಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
12ನೇ ಶತಮಾನದಲ್ಲಿ ನಿರ್ಮಿಸಿರುವ ಐತಿಹಾಸಿಕ ಕುಮಾರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹರಿಕೆ ಹೊತ್ತರೆ ಇಷ್ಟಾರ್ಥ ಸಿದ್ದಿಯಾಗುತ್ತೆ ಅನ್ನೋ ನಂಬಿಕೆ ಲಕ್ಷಾಂತರ ಭಕ್ತರದ್ದಾಗಿದೆ. ಹೀಗಾಗಿ ಸೋಮವಾರ ಮುಂಜಾನೆ ಈಶ್ವರಪ್ಪ ಕುಟುಂಬ ಸಮೇತವಾಗಿ ಕುಮಾರಸ್ವಾಮಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಪತ್ನಿ, ಪುತ್ರಿ ಮೊಮ್ಮಕ್ಕಳು ಈಶ್ವರಪ್ಪ ಜೊತೆ ಉಪಸ್ಥಿತರಿದ್ದರು.
Advertisement
ಸಂಡೂರಿನ ಘೋರ್ಪಡೆ ಕುಶಲ ಕಲಾ ಕೇಂದ್ರದಲ್ಲಿರುವ ಲಂಬಾಣಿ ಕೌಶಲ್ಯ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಮುನ್ನ ಈಶ್ವರಪ್ಪ ಕುಮಾರಸ್ವಾಮಿ ದರ್ಶನ ಪಡೆದ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಹೀಗಾಗಿ ಯಾವ ಕಾರಣಕ್ಕೆ ಕುಮಾರಸ್ವಾಮಿ ದರ್ಶನ ಪಡೆದು ವಿಶೇಷವಾಗಿ ಪೂಜೆ ಸಲ್ಲಿಸಿದ್ರು ಅನ್ನೋದು ಇದೀಗ ಕಾರ್ಯಕರ್ತರಲ್ಲಿ ಚರ್ಚೆಗೆ ಗ್ರಾಸವಾಗಿದೆ.
Advertisement
ಪಕ್ಷದ ಮುಖಂಡರಿಗೂ ತಿಳಿಸದೇ ಬಂದಿದ್ದ ಈಶ್ವರಪ್ಪನವರ ಆಗಮನದ ವಿಷಯ ತಿಳಿಯುತ್ತಿದ್ದಂತೆ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಕುಮಾರನಾಯ್ಕ್ ಈಶ್ವರಪ್ಪ ಅವರಿಗೆ ಸಾಥ್ ನೀಡಿ ಸಂಡೂರಿನ ಬಗ್ಗೆ ಮಾಹಿತಿ ನೀಡಿದ್ರು. ಇದೇ ವೇಳೆ ಸ್ಥಳೀಯ ಬಿಜೆಪಿ ಟಿಕೆಟ್ ಆಕ್ಷಾಂಕಿಗಳು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ಹೊರಗಿನ ಕ್ಷೇತ್ರದ ಮುಖಂಡರಿಗೆ ಸಂಡೂರಿನ ಟಿಕೆಟ್ ನೀಡಬಾರದೆಂದು ಪರೋಕ್ಷವಾಗಿ ಶ್ರೀರಾಮುಲು ಆಗಮನಕ್ಕೆ ವಿರೋಧ ವ್ಯಕ್ತಪಡಿಸಿ ಕೆ ಎಸ್ ಈಶ್ವರಪ್ಪನವರಿಗೆ ಮನವಿ ಸಲ್ಲಿಸಿದರು.