ಮಂಡ್ಯ: ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂಗೆ (KRS Dam) ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಇದರಿಂದ ಕಳೆದ 48 ಗಂಟೆಯಲ್ಲಿ 5 ಟಿಎಂಸಿಯಷ್ಟು ನೀರು ಹರಿದುಬಂದಿದ್ದು, ಬರೋಬ್ಬರಿ 100 ಅಡಿ ನೀರು ಭರ್ತಿಯಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂ ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಹೀಗಾಗಿ 48 ಗಂಟೆಯ ಅವಧಿಯಲ್ಲಿ ಕೆಆರ್‌ಎಸ್ ಡ್ಯಾಂಗೆ 5 TMC ನೀರು ಹರಿದುಬಂದಿದೆ. ಕೇವಲ 2 ದಿನಗಳ ಅವಧಿಯಲ್ಲಿ 8 ಅಡಿ ಡ್ಯಾಂ ನೀರು ಭರ್ತಿಯಾಗಿದೆ.
124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಜಲಾಶಯ 100 ಅಡಿ ನೀರು ತುಂಬಿದ್ದು, ಡ್ಯಾಂ ಭರ್ತಿಯತ್ತ ಸಾಗಿದೆ. ಇದರಿಂದ ರೈತರು ಹರ್ಷಗೊಂಡಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಮಳೆಯಿಲ್ಲದೇ ಕಂಗಾಲಾಗಿದ್ದ ಸಕ್ಕರೆ ನಾಡಿನ ರೈತರು, ಇದೀಗ ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಮನೆಗಳ ಗೋಡೆ ಕುಸಿತ – ಪ್ರತ್ಯೇಕ ಘಟನೆಯಲ್ಲಿ 2 ಕಂದಮ್ಮಗಳ ದಾರುಣ ಸಾವು
ಸದ್ಯ ಡ್ಯಾಂಗೆ 48,025 ಕ್ಯೂಸೆಕ್ ಒಳ ಹರಿವಿದ್ದು, ಇಂದು ಇನ್ನಷ್ಟು ನೀರಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ. 49.452 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್ ಕಳೆದ 48 ಗಂಟೆಗಳಲ್ಲಿ 5 ಟಿಎಂಸಿ ನೀರು ಹರಿದುಬಂದಿದ್ದು, ಒಟ್ಟು 22.809 ಟಿಎಂಸಿ ನೀರು ಡ್ಯಾಂನಲ್ಲಿ ಶೇಖರಣೆಯಾಗಿದೆ. ನೀರಿನ ಒಳಹರಿವು ಇದೇ ರೀತಿ ಮುಂದುವರಿದಲ್ಲಿ ಇನ್ನೂ 10 ದಿನಗಳಲ್ಲಿ ಡ್ಯಾಂ ಪೂರ್ಣ ಭರ್ತಿಯಾಗುವ ಸಾಧ್ಯತೆಯಿದೆ.
ಹಾರಂಗಿಯಿಂದ 30,000 ಕ್ಯೂಸೆಕ್ ನೀರು ಬಿಡುಗಡೆ:
ಕೊಡಗೂ ಜಿಲ್ಲೆಯಲ್ಲೂ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ (Cauvery River) ನೀರಿನ ಪ್ರಮಾಣ ಗಣನೀಯ ಏರಿಕೆ ಕಂಡಿದೆ. ಹಾರಂಗಿ ಜಲಾಶಯದಿಂದ 30,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಕುಶಾಲನಗರ ಸುತ್ತಮುತ್ತಲಿನ ಬಡಾವಣೆಗಳತ್ತ ಹರಿದ ನೀರು ಹರಿದು ಬಂದಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ವ್ಯಕ್ತಿಯ ತಲೆ ಮೇಲೆ ಒದ್ದು, ಮೂತ್ರ ವಿಸರ್ಜನೆ ಮಾಡಿ ದರ್ಪ – ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಘಟನೆ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 100 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 22.809 ಟಿಎಂಸಿ
ಒಳ ಹರಿವು – 48,025 ಕ್ಯೂಸೆಕ್
ಹೊರ ಹರಿವು – 5,449 ಕ್ಯೂಸೆಕ್
Web Stories