ಬೆಂಗಳೂರು: ಪ್ರಾರಂಭದಲ್ಲಿ ಅಷ್ಟೇನು ಮಳೆಯಾಗಿಲ್ಲದ ಕಾರಣ ಈ ಬಾರಿ ಜಲಾಶಯಗಳು ಭರ್ತಿಯಾಗುವುದಿಲ್ಲ ಎಂಬ ಆತಂಕ ರೈತರಲ್ಲಿ ಮನೆ ಮಾಡಿತ್ತು. ಆದರೆ, ಇತ್ತೀಚೆಗೆ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಕೆಆರ್‌ಎಸ್ ಸೇರಿದಂತೆ ಎಲ್ಲ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ.
ಕೊಡಗು, ಹಾಸನ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬಿರುಸುಗೊಂಡ ಹಿನ್ನೆಲೆ ಕೆಆರ್‌ಎಸ್ ಡ್ಯಾಂನ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನ ಒಳ ಹರಿವು 26,522 ಕ್ಯೂಸೆಕ್ ಏರಿಕೆಯಾಗಿದೆ. ಬೆಳಗ್ಗೆ 22,719 ಕ್ಯೂಸೆಕ್ ಇದ್ದ ಒಳ ಹರಿವು ಸಂಜೆ ಹೊತ್ತಿಗೆ 26,522 ಕ್ಯೂಸೆಕ್‍ಗೆ ತಲುಪಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಇದ್ದು, ಇಂದು 88.60 ಅಡಿ ನೀರು ಸಂಗ್ರವಾಗಿದೆ. ಒಳ ಹರಿವು 26,522 ಕ್ಯೂಸೆಕ್ ಇದ್ದು, ಪ್ರಸ್ತುತ 15.121 ಟಿಎಂಸಿ ನೀರು ಸಂಗ್ರಹವಾಗಿದೆ.
Advertisement
Advertisement
ಕೇರಳದ ವಯನಾಡಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಒಳಹರಿವಿನಲ್ಲಿಯೂ ಹೆಚ್ಚಳವಾಗಿದ್ದು, ಭರ್ತಿಯಾಗಲು ಕೆಲವೇ ಅಡಿಗಳಷ್ಟು ಬಾಕಿ ಇದೆ. ಹೀಗಾಗಿ ಹೊರಹರಿವು ಕೂಡ ಹೆಚ್ಚಳವಾಗಿದೆ.
Advertisement
ಕಬಿನಿ ಜಲಾಶಯದ ನೀರಿನ ಮಟ್ಟ 80 ಅಡಿ ತಲುಪಿದ್ದು, ಗರಿಷ್ಠ ಮಟ್ಟ 84 ಅಡಿ ಆಗಿದೆ. ಜಲಾಶಯದ ಸದ್ಯದ ಒಳಹರಿವು 23,000 ಕ್ಯೂಸೆಕ್ ಆಗಿದ್ದು, ಹೊರಹರಿವು 10,000 ಕ್ಯೂಸೆಕ್ ಇದೆ. ಜಲಾಶಯದ ಸಂಪೂರ್ಣ ಭರ್ತಿಗೆ 4 ಅಡಿಗಳು ಮಾತ್ರ ಬಾಕಿ ಇದ್ದು, ಒಳಹರಿವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಜಲಾಶಯದಿಂದ ಹೊರಹರಿವು ಹೆಚ್ಚಳ ಮಾಡಲಾಗಿದೆ.
Advertisement
ಕಪಿಲಾ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕಪಿಲಾ ನದಿಯ ಇಕ್ಕೆಲಗಳ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.
ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯ ಸಹ ಭರ್ತಿಯಾಗುತ್ತಿದ್ದು, ನೀರಿನ ಮಟ್ಟದಲ್ಲಿಯೂ ಸಹ ಹೆಚ್ಚಳವಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2,922 ಅಡಿ ಆಗಿದ್ದು, 2,899.77 ಅಡಿಯಷ್ಟು ಭರ್ತಿಯಾಗಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 37.103 ಟಿಎಂಸಿಯಾಗಿದ್ದು, ಒಳಹರಿವು 28,317 ಕ್ಯೂಸೆಕ್ ಆಗಿದೆ.