ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯ ಭರ್ತಿಗೆ ಇನ್ನೊಂದು ಅಡಿಯಷ್ಟೇ ಬಾಕಿ ಇದ್ದು, ಇದರಿಂದ ರೈತರು ಹಾಗೂ ಜನರಲ್ಲಿ ಸಂತಸ ಮನೆಮಾಡಿದೆ.
ಹಿಂಗಾರು ಹಾಗೂ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಈ ಬಾರಿ ಜಲಾಶಯ ಭರ್ತಿಯಾಗುವ ಅನುಮಾನ ಕಳೆದ ತಿಂಗಳಿನಿಂದ ಮೂಡಿದ ಜೊತೆಗೆ ಜನರಲ್ಲಿ ಆತಂಕವು ಸಹ ಹೆಚ್ಚಾಗಿತ್ತು. ಹೀಗಾಗಿ ಜಲಾಶಯ ಭರ್ತಿಯಾಗದ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಯಿ ಅವರು ಅಕ್ಟೋಬರ್ 7ರಂದು ಕಾವೇರಿ ಮಾತೆಗೆ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ್ದರು. ಇದನ್ನೂ ಓದಿ: ನಾಯಿ ಜೊತೆ ಕೈಲಾಶ್ ವಿಜಯವರ್ಗಿಯಾ ಫೋಟೋ ಕೊಲಾಜ್ – ವಿವಾದ ಸೃಷ್ಟಿಸಿದ ತಥಾಗತ ರಾಯ್
ಇದಲ್ಲದೇ ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಪರ್ಜನ್ಯ ಹೋಮವನ್ನು ಸಹ ಮಾಡಿಸಲಾಗಿತ್ತು. ವಿಶೇಷ ಪೂಜೆ ಹಾಗೂ ಹೋಮದ ಬಳಿಕ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಇದರಿಂದ ಈ ಬಾರಿ ಕೆಆರ್‌ಎಸ್ ಜಲಾಶಯ ಭರ್ತಿಯಾಗುವುದಿಲ್ಲ ಎಂಬ ಅನುಮಾನ ದೂರವಾಗಿದೆ. ಜಲಾಶಯ ಭರ್ತಿಯಾಗಲು ಕೇವಲ ಒಂದು ಅಡಿಯಷ್ಟೇ ಬಾಕಿ ಉಳಿದುಕೊಂಡಿದೆ. ಇದನ್ನೂ ಓದಿ: ಪ್ರತಿಭಟನಾ ಸ್ಥಳದಲ್ಲಿಯೇ ದೀಪಾವಳಿ ಆಚರಿಸಲಿದ್ದಾರೆ: ರಾಕೇಶ್ ಟಿಕಾಯತ್
124.80 ಅಡಿಗಳ ಗರಿಷ್ಠ ಮಟ್ಟ ಇರುವ ಕೆಆರ್‌ಎಸ್ ಜಲಾಶಯ ಸದ್ಯ 123.40 ಅಡಿಗಳಷ್ಟು ಭರ್ತಿಯಾಗಿದೆ. ಇಂದು ಕೆಆರ್‌ಎಸ್ ಜಲಾಶಯಕ್ಕೆ 19.341 ಕ್ಯೂಸೆಕ್‍ನಷ್ಟು ಒಳಹರಿವಿದ್ದು, 3.535 ಕ್ಯೂಸೆಕ್ ನೀರನ್ನು ಡ್ಯಾಂನಿಂದ ಹೊರಗೆ ಬಿಡುಗಡೆ ಮಾಡಲಾಗುತ್ತಿದೆ. ಕೆಆರ್‍ಎಸ್ ಜಲಾಶಯದ ಗರಿಷ್ಠ ನೀರಿನ ಸಂಗ್ರಹ 49.452 ಟಿಎಂಸಿ ಇದ್ದು, ಸದ್ಯ 47.516 ಟಿಎಂಸಿಯಷ್ಟು ಭರ್ತಿಯಾಗಿದೆ.