ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಬೀಳುತ್ತಿರುವ ಹಿನ್ನೆಲೆ 24 ಗಂಟೆಯಲ್ಲಿ ಕೆಆರ್‌ಎಸ್ ಡ್ಯಾಂನಲ್ಲಿ (KRS Reservoir) 3 ಅಡಿ ನೀರು ಹೆಚ್ಚಳವಾಗಿದೆ.
ಹಳೆ ಮೈಸೂರು ಭಾಗದ ಜೀವನಾಡಿಯಾದ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಗೆ ಉತ್ತಮ ಒಳಹರಿವು ಬರುತ್ತಿದ್ದು, ಒಂದೇ ದಿನ ಡ್ಯಾಂಗೆ ಮೂರು ಅಡಿ ಭರ್ತಿಯಾಗಿದೆ.ಇದನ್ನೂ ಓದಿ: ನಿರಂತರ ಮಳೆಯಿಂದಾಗಿ ಜೀವಕಳೆ ಪಡೆದ ಕೊಡಗಿನ ಮಲ್ಲಳ್ಳಿ ಜಲಪಾತ
ಕಳೆದ ಎರಡು ದಿನಗಳ ಹಿಂದೆ ಕೆಆರ್‌ಎಸ್ ಜಲಾಶಯಕ್ಕೆ 350 ಕ್ಯುಸೆಕ್ ಒಳಹರಿವು ಇತ್ತು. ಎರಡು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಇಂದು 19,129 ಕ್ಯುಸೆಕ್ ನೀರು ಬಂದಿದೆ. ಈ ಮೂಲಕ 24 ಗಂಟೆಯಲ್ಲಿ 2 ಟಿಎಂಸಿ ನೀರು ಬಂದಿದ್ದು, 3 ಅಡಿಯಷ್ಟು ಡ್ಯಾಂ ಬರ್ತಿಯಾಗಿದೆ.
ಮುಂಗಾರು ಆರಂಭದಲ್ಲಿಯೇ ಉತ್ತಮ ಮಳೆಯಾಗುತ್ತಿರುವುದು ರೈತರ ಮುಖದಲ್ಲಿ ಮಂದಹಾಸ ತಂದಿದೆ. ಹಲವು ವರ್ಷಗಳ ಬಳಿಕ ಮೇ ತಿಂಗಳಿನಲ್ಲಿ ಈ ಮಟ್ಟದ ಒಳಹರಿವು ಇದ್ದು, ಹೀಗೆ ಮಳೆಯಾದರೆ ಈ ಬಾರಿ ಆದಷ್ಟು ಬೇಗ ಕೆಆರ್‌ಎಸ್ ಡ್ಯಾಂ ಭರ್ತಿಯಾಗಲಿದೆ.
124.80 ಅಡಿ ಗರಿಷ್ಠ ಮಟ್ಟ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್‌ನಲ್ಲಿ 92.00 ಅಡಿ ನೀರಿದೆ. ಕನ್ನಂಬಾಡಿ ಕಟ್ಟೆ 49.452 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು ಸದ್ಯ 17.163 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವಿನ ಪ್ರಮಾಣ 19,129 ಕ್ಯುಸೆಕ್ ಇದ್ದು, 354 ಕ್ಯುಸೆಕ್ ಹೊರಹರಿವಿದೆ.ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಕಾರಿನ ಮೇಲೆ ಬಿತ್ತು ಬೃಹತ್ ಮರ, ನಾಲ್ವರು ಪಾರು