KRS ಬಿರುಕು ವಿಚಾರದಲ್ಲಿ ಸುಮಲತಾ ದ್ವಂದ್ವ- ದೊಡ್ಡವರ ಬಗ್ಗೆ ಮಾತಾಡಲ್ಲ ಅಂದ್ರು ಹೆಚ್‍ಡಿಕೆ

Public TV
2 Min Read
Sumalatha HDK 1

– ಗಣಿ ಅಕ್ರಮ ಬಗ್ಗೆ ಜು.30ರೊಳಗೆ ವರದಿಗೆ ಸೂಚನೆ

ಬೆಂಗಳೂರು: ಮಂಡ್ಯದ ಅಕ್ರಮ ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಸಮರ ಮತ್ತಷ್ಟು ಹೊಸ ರೂಪ ಪಡೆದುಕೊಂಡಿದೆ. ಅಕ್ರಮ ಗಣಿಗಾರಿಕೆಯಿಂದ ಕೆಆರ್‍ಎಸ್ ಡ್ಯಾಂಗೆ ಹಾನಿಯ ಬಗ್ಗೆ ಸಂಸದೆ ಸುಮಲತಾ ದ್ವಂದ್ವ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕೆಆರ್‍ಎಸ್ ಡ್ಯಾಂ ಬಿರುಕು ಬಿಟ್ಟಿದೆ ಅಂದಿದ್ರು. ಆದ್ರೆ ಇಂದು ಕೆಆರ್‍ಎಸ್ ಡ್ಯಾಂ ಪರಿಶೀಲನೆ ವೇಳೆ, ಡ್ಯಾಂ ಬಿರುಕು ಬಿಟ್ಟಿದೆ ಎಂದು ನಾನು ಹೇಳಿಲ್ಲ. ಬಿರುಕು ಬಿಟ್ಟಿದಿಯೇ ಎಂದು ನಾನು ಪ್ರಶ್ನಿಸಿದ್ದೆ ಎಂದು ಹೇಳಿದರು.

ಅಧಿಕಾರಿಗಳ ಜೊತೆ ಸಭೆ ನಡೆಸಿ, ಮಾಹಿತಿ ಪಡೆದರು. ಡ್ಯಾಮ್ ಬಿರುಕೇ ಆಗಿಲ್ಲ ಅನ್ನೋದು ಅಸತ್ಯ. ಈಗ ಸಣ್ಣಪುಟ್ಟ ಬಿರುಕು ಅಂತೇವೆ, ಮುಂದೆ ಅವೇ ಬಹಳ ಮುಖ್ಯ ಆಗುತ್ತೆ. ಗ್ರೋಟಿಂಗ್ ಅನ್ನೋದನ್ನ ಯಾಕೆ ಮಾಡ್ತೀರಿ? 67 ಕೋಟಿಯಲ್ಲಿ ಏನು ಮಾಡಿದ್ರಿ? ಅಕ್ರಮ ಗಣಿಗಾರಿಕೆ ಬ್ಲಾಸ್ಟಿಂಗ್‍ನಿಂದ ಡ್ಯಾಂಗೆ ಏನೂ ಆಗಲ್ವಾ? ಎಂದು ಕ್ಲಾಸ್ ತೆಗೆದುಕೊಂಡರು. 7 ದಿನದಲ್ಲಿ ಮಾಹಿತಿ ಕೊಡೋದಾಗಿ ಅಧಿಕಾರಿಗಳು ಹೇಳಿದರು.

Sumalatha HDK 2 medium

ಸಂಜೆ ಶ್ರೀರಂಗಪಟ್ಟಣದ ಬೇಬಿಬೆಟ್ಟಕ್ಕೂ ಸಂಸದೆ ಸುಮಲತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ನೂರಾರು ರೈತ ಸಂಘದ ಕಾರ್ಯಕರ್ತರು ಜಮಾಯಿಸಿದ್ರು. ನಮ್ಮ ಬದುಕು ಗಣಿಗಾರಿಕೆಯಿಂದಲೇ ನಡೆಯುತ್ತಿದೆ. ಸಾವಿರಾರು ಜನ ಗಣಿಗಾರಿಕೆಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಕೈಕುಳಿ ಗಣಿಗಾರಿಕೆಗೆ ಅನುಮತಿ ಕೊಡುವಂತೆ ಮನವಿ ಮಾಡಿದರು. ಗಣಿ ಮಾಲೀಕರು ಕೂಡ ಮನವಿ ಸಲ್ಲಿಸಿದ್ರು. ಗಣಿಗಾರಿಕೆಯಿಂದ ಡ್ಯಾಮ್‍ಗೆ ಅಪಾಯ ಇದ್ಯಾ ಇಲ್ವಾ..? ಅಂತ ಟ್ರಯಲ್ ಬ್ಲಾಸ್ಟ್ ನಲ್ಲಿ ಸ್ಪಷ್ಟತೆ ಸಿಗಲಿದೆ. ವಿರೋಧಿಸುತ್ತಿರುವ ರೈತರ ಮನವೊಲಿಸ್ತೇನೆ ಎಂದರು.

MYS 4 medium

ಈ ಮದ್ಯೆ, ಸುಮಲತಾ ಭೇಟಿ ಬಳಿಕ ಮಂಡ್ಯದಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ಸ್ಥಳ ಪರಿಶೀಲಿಸಿ, ಬರಬೇಕಾಗಿರುವ ರಾಜಧನ ಹಾಗೂ ದಂಡ ವಸೂಲಾತಿ ಬಗ್ಗೆ ಜುಲೈ 30ರೊಳಗೆ ವರದಿ ಸಲ್ಲಿಸಲು ಗಣಿ ಸಚಿವ ಮುರುಗೇಶ್ ನಿರಾಣಿ ಆದೇಶಿಸಿದ್ದಾರೆ.

ಮಾಜಿ ಸಿಎಂ ಹೆಚ್‍ಡಿಕೆ ವಿರುದ್ಧ ಮತ್ತೆ ಸಂಸದೆ ಸುಮಲತಾ ವಾಗ್ದಾಳಿ ನಡೆಸಿದ್ದಾರೆ. ಕಣ್ಣೀರು ಹಾಕುವುದು ಯಾರು ಎಂಬುದು ಜನರಿಗೆ ಗೊತ್ತು. ಪ್ರತಿ ಚುನಾವಣೆಯಲ್ಲೂ ಕಣ್ಣೀರು ಹಾಕುವ ಕಾರ್ಡ್ ಪ್ಲೇ ಆಗಿದ್ದಾರೆ. ನನಗೆ ಕಣ್ಣೀರ ರಾಜಕೀಯ ಬೇಕಿಲ್ಲ. ನನ್ನ ವಿರುದ್ಧ ಸೊಂಟದ ಭಾಷೆ ಬಳಸಿದ್ದಾರೆ. ವೀಡಿಯೋ, ಫೋಟೋ ಎಡಿಟ್ ಮಾಡೋರು ಮಾಡಲಿ. ಇದಕ್ಕೆಲ್ಲ ನಾನು ಜಗ್ಗಲ್ಲ, ಕುಗ್ಗಲ್ಲ ಎಂದು ತಿರುಗೇಟು ಕೊಟ್ಟರು.

ಸುಮಲತಾ ಬಗ್ಗೆ ಮಾತನಾಡಲು ಮಾಜಿ ಸಿಎಂ ಕುಮಾರಸ್ವಾಮಿ ನಿರಾಕರಿಸಿದ್ದಾರೆ. ಚನ್ನಪಟ್ಟಣದಲ್ಲಿ ಪ್ರತಿಕ್ರಿಯೆ ಕೇಳಿದಾಗ, ದೊಡ್ಡವರ ವಿಷಯವನ್ನ ನನ್ನ ಬಳಿ ಕೇಳಬೇಡಿ. ಮಾತನಾಡುವ ವಿಚಾರ ಏನು ಇಲ್ಲ ಅಂದ್ರು. ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಮಾತನಾಡಿ, ನಿಮ್ಮ ಕಿತ್ತಾಟ, ಒಳಜಗಳದಿಂದ ರಾಜ್ಯವನ್ನ ಹಾಳು ಮಾಡಬೇಡಿ ಅಂದ್ರೆ, ಸಚಿವ ಬಿಸಿ ಪಾಟೀಲ್, ನಿಮ್ಮ ರಾಜಕೀಯಕ್ಕೆ ಕನ್ನಂಬಾಡಿ ಕಟ್ಟೆ ಬೇಕಿತ್ತಾ ಅಂದ್ರು.

Share This Article
Leave a Comment

Leave a Reply

Your email address will not be published. Required fields are marked *