Districts
ಉಡುಪಿಯಲ್ಲೊಂದು ದುಬಾರಿ ಚಿನ್ನದ ಮನೆ ನಿರ್ಮಾಣ

-100 ಕೆಜಿ ಬಂಗಾರದಲ್ಲಿ, 40 ಕೋಟಿ ರೂ.ಯಲ್ಲಿ ಕೃಷ್ಣ ಗರ್ಭಗುಡಿ ನಿರ್ಮಾಣ
ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲೊಂದು ದುಬಾರಿ ಮನೆ ಸಿದ್ಧಗೊಳ್ಳುತ್ತಿದೆ. ಈ ಮನೆಯ ಮಹಡಿ ಚಿನ್ನದಿಂದಲೇ ಎರಡು ಅಂತಸ್ತು ನಿರ್ಮಾಣ ಆಗುತ್ತಿದೆ. 100 ಕೆಜಿ ಬಂಗಾರವನ್ನು ಛಾವಣಿ ನಿರ್ಮಾಣಕ್ಕೆ ಉಪಯೋಗಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಮನೆ ಸಿದ್ಧಗೊಳ್ಳಲಿದೆ.
ಉಡುಪಿ ಕೃಷ್ಣಮಠದ ಕಡೆಗೋಲು ಕೃಷ್ಣ ಇಷ್ಟು ವರ್ಷ ತಾಮ್ರದ ಗರ್ಭಗುಡಿಯೊಳಗೆ ನಿಂತು ಬರುವ ಭಕ್ತರಿಗೆ ದರ್ಶನ ಕೊಡುತ್ತಿದ್ದ. ಆದರೆ ಈಗ 40 ಕೋಟಿ ವೆಚ್ಚದಲ್ಲಿ ಕೃಷ್ಣಮಠದ ಗರ್ಭಗುಡಿಯ ಕೆಲಸವನ್ನು ಈಗಿನ ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾಡಿಸುತ್ತಿದ್ದಾರೆ. 20 ಗ್ರಾಂ ಚಿನ್ನದ ತಗಡಿನ 5,000 ಹಲಗೆ, 100 ಕೆಜಿ ಬಂಗಾರ ಹಾಗೂ 40 ಕೋಟಿ ರುಪಾಯಿಯಲ್ಲಿ ಚಿನ್ನದ ಮನೆ ನಿರ್ಮಾಣವಾಗುತ್ತಿದೆ.
ಈಗಾಗಲೇ ತಾಮ್ರ, ಬೆಳ್ಳಿ ಚಿನ್ನದ ಹಾಳೆಯನ್ನು ತಯಾರು ಮಾಡುವ ಕೆಲಸ ಶುರುವಾಗಿದೆ. ಗರ್ಭಗುಡಿಯ ಕಲಶ ಸಂಕೋಚ ವಿಧಿವಿಧಾನ ನೆರವೇರಿತು. ಹೋರಿಯ ಕತ್ತಿಗೆ ಹಗ್ಗ ಹಾಕಿ, ಮತ್ತೊಂದು ತುದಿಯನ್ನು ಕಲಶಕ್ಕೆ ಕಟ್ಟಿ ಎಳೆಯುವ ಪ್ರಕ್ರಿಯೆ ನಡೆಯಿತು. ಎರಡೂವರೆ ತಿಂಗಳಲ್ಲಿ ಗರ್ಭಗುಡಿ ನಿರ್ಮಾಣ ಪೂರ್ಣಗೊಳ್ಳಲಿದ್ದು, ಮಠಕ್ಕೆ ಬರುವ ಭಕ್ತರಿಗೆ ದೇವರ ದರ್ಶನಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಶ್ರೀ ವಿದ್ಯಾಧೀಶ ಸ್ವಾಮೀಜಿ ಪಲಿಮಾರು ಹೇಳಿದ್ದಾರೆ.
ಗರ್ಭಗುಡಿಯ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಗಣಹೋಮ, ಪ್ರಾಯಶ್ಚಿತ್ತ ಹೋಮ, ವಾಸ್ತು ಪೂಜೆ, ಕೃಷ್ಣ ಗಾಯತ್ರಿ ಮಂತ್ರ ಪಠಣ, ಮೃತ್ಯುಂಜಯ ಹೋಮ ಊರಿನ ದೋಷ ಪರಿಹಾರಕ್ಕೆ ಮುಷ್ಟಿ ಕಾಣಿಕೆ ಸೇವೆ ನೆರವೇರಿದೆ. ಮರದ ಮೇಲೆ ತಾಮ್ರದ ಹಾಳೆಯಲ್ಲಿ ಮಂತ್ರಗಳನ್ನು ಬರೆಯಲಾಗುತ್ತದೆ. ಅದರ ಮೇಲೆ ಬೆಳ್ಳಿಯ ತಗಡು ಮುಚ್ಚಿ, ಮೇಲ್ಬಾಗಕ್ಕೆ ಚಿನ್ನದ ಹೊದಿಕೆ ಹಾಸಲಾಗುತ್ತದೆ. ಸಂಕೋಚ ವಿಧಿಯಲ್ಲಿ ಕೃಷ್ಣಾಪುರ, ಕಾಣಿಯೂರು, ಅದಮಾರು ಸ್ವಾಮೀಜಿಗಳು ಪಾಲ್ಗೊಂಡಿದ್ದರು. 800 ವರ್ಷದ ಹಳೆಯ ತಾಮ್ರದ ತಗಡನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ ಎಂದು ಕೃಷ್ಣಭಕ್ತ ವೆಂಕಟೇಶ್ ಆಚಾರ್ಯ ತಿಳಿಸಿದ್ದಾರೆ.
ಗರ್ಭಗುಡಿಗೆ ಚಿನ್ನದ ಅಂತಸ್ತು ಹೊದಿಸಿದರೆ ಆ ಭಾಗದಲ್ಲಿ ಹೆಚ್ಚು ಶಕ್ತಿ ಕ್ರೋಡೀಕರಣವಾಗುತ್ತದೆ ಎಂಬ ನಂಬಿಕೆಯಿದೆ. ಈಗಾಗಲೇ 50 ಕೆಜಿಗೂ ಹೆಚ್ಚು ಚಿನ್ನದ ಸಂಗ್ರಹ ಭಕ್ತರಿಂದ ಆಗಿದೆ. ಪ್ರತಿನಿತ್ಯ ಮಠಕ್ಕೆ ಬರುವ ಭಕ್ತರಿಂದ ದೇಣಿಗೆ ರೂಪದಲ್ಲಿ ಚಿನ್ನ, ಹಣ ಸಂಗ್ರಹವಾಗುತ್ತಿದೆ. ಮೇ ಮೊದಲ ವಾರದಲ್ಲಿ ಬಂಗಾರದ ಮೇಲ್ಛಾವಣಿ ಕಾರ್ಯ ಪೂರ್ಣಗೊಳ್ಳಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
