ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣದೇವರ ಜಯಂತಿ ಆರಂಭಗೊಂಡಿದೆ. ಅಷ್ಟಮಿ ತಿಥಿ- ರೋಹಿಣಿ ನಕ್ಷತ್ರ ಮೂಡುವ ಘಳಿಗೆಯಲ್ಲಿ ಶ್ರೀಕೃಷ್ಣನಿಗೆ ಆಘ್ರ್ಯವನ್ನು ಸಲ್ಲಿಸಲಾಯ್ತು. ನಡುರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ನಂದಗೋಕುಲದಲ್ಲಾದ ಸಂಭ್ರಮ ಉಡುಪಿಯಲ್ಲಿಯೂ ಮರುಕಳಿಸಿತು.
Advertisement
ಸಿಂಹಮಾಸ-ಕೃಷ್ಣ ಪಕ್ಷದಂದು ಶ್ರೀಕೃಷ್ಣ ಜನ್ಮತಾಳಿದ್ದಾನೆ ಎಂಬುವುದಾಗಿ ಉಲ್ಲೇಖವಿದೆ. ಅದರಂತೆ ರೋಹಿಣಿ ನಕ್ಷತ್ರ ಉದಯವಾಗುವ ಕಾಲದಲ್ಲಿ ಆಘ್ರ್ಯಪ್ರದಾನ ಮಾಡಿ ಕೃಷ್ಣಪರಮಾತ್ಮನನ್ನು ಬರಮಾಡಿಕೊಳ್ಳಲಾಯ್ತು. ಮಠದ ಗರ್ಭಗುಡಿಯಲ್ಲಿ ಶ್ರೀಕೃಷ್ಣನಿಗೆ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಮತ್ತು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೀರಿನ ಅಘ್ರ್ಯನೀಡಿ ಸ್ವಾಗತ ಮಾಡಿದರು. ಇದಾದ ನಂತರ ಕೃಷ್ಣಾಪುರ ಸ್ವಾಮೀಜಿ ಮತ್ತು ಸೋಸೆ ಶ್ರೀಪಾದಂಗಳವರು ಅಘ್ರ್ಯಪ್ರದಾನ ಮಾಡಿದರು.
Advertisement
Advertisement
ಚಂದ್ರಶಾಲೆಯಲ್ಲಿ ತುಳಸಿಯ ಸಾನಿಧ್ಯದಲ್ಲಿ ಚಂದ್ರನಿಗೆ ಅಘ್ರ್ಯ ಸಮರ್ಪಿಸಲಾಯ್ತು. ಕೃಷ್ಣ ಚಂದ್ರವಂಶಸ್ಥನಾಗಿರುವುದರಿಂದ ಆತನ ವಂಶಕ್ಕೂ ಇಲ್ಲಿ ಗೌರವ ಸಲ್ಲಿಸುವ ಧಾರ್ಮಿಕ ಪ್ರಕ್ರಿಯೆ ನಡೆಯಿತು. ತೆಂಗಿನ ಕಾಯಿಯ ಗಡಿಗೆ ಹಾಲನ್ನು ಶಂಖದ ಮೂಲಕ ಚಂದ್ರನಿಗೆ ಅಘ್ರ್ಯ ನೀಡುತ್ತಿದ್ದಂತೆ ಭಕ್ತರು ಪುಳಕಿತರಾದರು. ಭೂಮಿಗೆ ದೇವರ ಆಗಮನವಾಗಿದೆ ಅಂತ ಸಂಭ್ರಮಿಸಿದರು.
Advertisement
ಮೊಸರುಕುಡಿಕೆ: ಶ್ರೀ ಕೃಷ್ಣನ ಜನ್ಮ ದಿನವನ್ನು ಇಂದು ನಗರದಲ್ಲಿ ಮೊಸರುಕುಡಿಕೆಯ ಮೂಲಕ ಆಚರಿಸಲಾಗುತ್ತಿದೆ. ಸಾವಿರಾರು ವೇಷಗಳ ಕುಣಿತ, ಬರುವ ಅಸಂಖ್ಯ ಭಕ್ತರಿಗೆ ಉಟೋಪಚಾರ- ಸಿಹಿ ವಿತರಣೆಯ ಮೂಲಕ ಉಡುಪಿಗೆ ಉಡುಪಿಯೇ ಕಡೆಗೋಲು ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸುತ್ತಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಟ್ಲಪಿಂಡಿ ಮಹೋತ್ಸವ ಆರಂಭವಾಗಲಿದೆ. ದಿನಪೂರ್ತಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಬರುವ ಭಕ್ತರಿಗೆ ಅನ್ನಪ್ರಸಾದ ಸೇವೆ ಎಲ್ಲವನ್ನೂ ವಿತರಿಸಲು ಕೃಷ್ಣಮಠ ಸಜ್ಜಾಗಿದೆ.
ರಂಗು ತುಂಬುತ್ತಿರುವ ವೇಷಗಳು: ಉಡುಪಿ ಇಂದು ಸಂಪೂರ್ಣ ನಂದಗೋಕುಲವಾಗಿದೆ. ಎಲ್ಲಿನೋಡಿದರಲ್ಲಿ ಮುದ್ದುಕೃಷ್ಣರು ಕಾಣಿಸುತ್ತಿದ್ದಾರೆ. ಎರಡು ದಿನ ಅಷ್ಟಮಿಯ ಉಪವಾಸ ಮಾಡಿದ್ದ ಭಕ್ತರು ಇಂದು ವಿಟ್ಲಪಿಂಡಿಯ ಸಂಭ್ರಮದಲ್ಲಿದ್ದಾರೆ.
ಮಾರಿಕಾಡು ವೇಷ: ಉಡುಪಿ ನಗರದಾದ್ಯಂತ ಎಲ್ಲಿ ನೋಡಿದರಲ್ಲಿ ವೇಷಗಳು ಕಾಣಿಸುತ್ತಿದೆ. ಈ ಪೈಕಿ ಎಲ್ಲರ ಗಮನಸೆಳೆಯುತ್ತಿರೋದು ಮಾರಿಕಾಡು ವೇಷ. ಉಡುಪಿಯ ಯುವಕ ರಮಾಂಜಿ ಅವರು ಈ ವಿಭಿನ್ನ ವೇಷ ಹಾಕಿದ್ದಾರೆ. ದೈತ್ಯ ಪ್ರಾಣಿಯೊಂದು ಓಡಾಡಿದಂತೆ ಈ ವೇಷ ನಗರದಾದ್ಯಂತ ಸಂಚಾರ ಮಾಡುತ್ತಿದೆ. ಫೋಮ್ ಮತ್ತು ಬಣ್ಣವನ್ನು ಉಪಯೋಗಿಸಿ ಈ ವೇಷ ಹಾಕಿದ್ದಾರೆ ರಾಮಾಂಜಿ. ಅಲ್ಲದೇ ಅಷ್ಟಮಿ ಮತ್ತು ವಿಟ್ಲಪಿಂಡಿಯಂದು ಕಲೆಕ್ಟ್ ಆಗುವ ಹಣವನ್ನೆಲ್ಲಾ ನಮ್ಮಭೂಮಿ ಸಂಸ್ಥೆಗೆ ನೀಡಲಿದ್ದಾರೆ.
ಉಡುಪಿ ನಗರದಾದ್ಯಂತ ಹುಲಿಗಳು ದಾಂಗುಡಿಯಿಟ್ಟಿದೆ. ಎಲ್ಲಿ ನೋಡಿದ್ರೂ ಉಡುಪಿಯಲ್ಲಿ ಹುಲಿಗಳೇ ಕಾಣಿಸುತ್ತಿದೆ. ತಲೆಯಲ್ಲಿ ಕಾಯಿ ಒಡೆಯುವುದು- ಬೆಂಕಿಯುಂಡೆ ಉಗುಳುವುದು- ವಿವಿಧ ಕಸರತ್ತುಗಳನ್ನ ಮಾಡುವುದು ಹುಲಿ ನೃತ್ಯದ ಸ್ಪೆಷಲ್ ಆಗಿದೆ.