ದೇಶಾದ್ಯಂತ ಇಂದು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆ ಮಾಡಿದೆ. ಈ ಸಂದರ್ಭದಲ್ಲಿ ಕೃಷ್ಣನ ಮಹಿಮೆಯ ಸ್ಥಳ ಬಗ್ಗೆ ತಿಳಿಯುವುದು ಅತ್ಯವಶ್ಯಕವೂ ಆಗಿದೆ. ʻದ್ವಾರಕೆʼ ಎಂದೊಡನೆ ನೆನಪಾಗೋದು ಮಹಾಭಾರತ. ದೇವಭೂಮಿ ಎಂದೇ ಕರೆಸಿಕೊಳ್ಳುವ ದ್ವಾರಕೆ ಈಗಲೂ ಶ್ರೀಕೃಷ್ಣನ ಧಾಮವಾಗಿ ಸುಪ್ರಸಿದ್ಧವಾಗಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಈ ದೇವಭೂಮಿಗೆ ಭೇಟಿ ನೀಡಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗುತ್ತಾರೆ. ಈ ದಿನ ಕೃಷ್ಣಜನ್ಮಾಷ್ಟಮಿಯಲ್ಲಿ ಇಲ್ಲಿ ವೈಭವೋಪೇತವಾಗಿ ಆಚರಿಸಲಾಗುತ್ತಿದ್ದು, ದೇಶ ವಿದೇಶಗಳಿಂದ ಸಹಸ್ರಾರು ಭಕ್ತರು ಕೃಷ್ಣನ ದರ್ಶನಕ್ಕೆ ದಾಂಗುಡಿ ಇಡುತ್ತಿದ್ದಾರೆ. ʻದ್ವಾರಕಾʼ (Dwarka) ಎಂದರೆ ಸ್ವರ್ಗದ ದ್ವಾರ ಎಂದು ಅರ್ಥ. ಮಹಾಭಾರತದ ಪ್ರಕಾರ ಈ ಜಾಗದ ಪೂರ್ವನಾಮ ಕುಶಸ್ಥಲಿ. ಹಿಂದೂ ಸಂಪ್ರದಾಯದ ಪವಿತ್ರ ಸಪ್ತಪುರಿಗಳಲ್ಲಿ ಒಂದಾಗಿರುವ ಕಾರಣ ಇದು ಮೋಕ್ಷಪುರಿ.
ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ್ದ ನಾಲ್ಕು ಪೀಠಗಳಲ್ಲಿ ಪಾಶ್ಚಿಮಾತ್ಯ ಶಾರದಾ ಪೀಠ ಇರುವುದು ಇಲ್ಲಿಯೇ. ಹಿಂದೂ ಧರ್ಮೀಯರಿಗೆ ಮಾತ್ರವೇ ಅಲ್ಲ, ಜೈನ ಮತ್ತು ಬೌದ್ಧ ಧರ್ಮಗಳಲ್ಲೂ ಪವಿತ್ರವಾಗಿರುವ ಕ್ಷೇತ್ರ ಈ ದ್ವಾರಕೆ. ಎಲ್ಲಕ್ಕಿಂತ ಹೆಚ್ಚಾಗಿ ದ್ವಾರಕೆ ಶ್ರೀಕೃಷ್ಣನ ರಾಜಧಾನಿಯಾಗಿತ್ತು. ಇದು ಸಾಕ್ಷಾತ್ ಭಗವಂತನ ಕರ್ಮಭೂಮಿ! ಯದುವಂಶದ ಕೊನೆಯ ನೆಲೆ ಇದು. ಶ್ರೀಕೃಷ್ಣನ ಅವತಾರ ಸಮಾಪ್ತಿಯ ಬಳಿಕ ಈ ಪಟ್ಟಣವನ್ನು ಸಮುದ್ರ ನುಂಗಿತ್ತು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.
Advertisement
Advertisement
ಪುರಾಣಗಳ ದ್ವಾರಕೆ ಇಂದು ಗುಜರಾತ್ ರಾಜ್ಯದ ನೈಋತ್ಯ ಭಾಗದಲ್ಲಿರುವ ಒಂದು ಪಟ್ಟಣ. ಈ ಪ್ರದೇಶಕ್ಕೆ ದೇವಭೂಮಿ ದ್ವಾರಕಾ ಜಿಲ್ಲೆ ಎಂದು ಹೆಸರಿದೆ. ಇಲ್ಲಿರುವ ಶ್ರೀಕೃಷ್ಣನ ಪವಿತ್ರ ಕ್ಷೇತ್ರಗಳಲ್ಲಿ ದ್ವಾರಕಾಧೀಶ ಮಂದಿರ ಅತ್ಯಂತ ಮಹತ್ವದ್ದಾಗಿದೆ. ಹಾಗಿದ್ದರೇ ಆ ದ್ವಾರಕಾಧೀಶ ಮಂದಿರದ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..
Advertisement
ದ್ವಾರಕಾಧೀಶ ಮಂದಿರ
ದ್ವಾರಕೆಯ ಆರಾಧ್ಯದೈವವಾದ ಶ್ರೀಕೃಷ್ಣನ ದೇವಾಲಯಕ್ಕೆ ದ್ವಾರಕಾಧೀಶ ಮಂದಿರ ಎಂದು ಹೆಸರು. ಈ ದೇವಾಲಯ ಇರುವುದು ಗೋಮತೀ ನದಿಯ ಸಂಗಮಕ್ಷೇತ್ರದಲ್ಲಿ, ದೇಶ-ವಿದೇಶಗಳಿಂದ ಭಕ್ತರನ್ನು ಆಕರ್ಷಿಸುತ್ತಿರುವ ಪ್ರಾಚೀನ ದೇವಾಲಯ ಇದು. ದ್ವಾರಕಾಧೀಶ ಮಂದಿರದ ಗೋಪುರವನ್ನು 16ನೇ ಶತಮಾನದಲ್ಲಿ ರಾಜಾ ಜಗತ್ ಸಿಂಗ್ ರಾಠೋಡ್ ಕಟ್ಟಿಸಿದ್ದ ಕಾರಣ ಇದಕ್ಕೆ ಜಗನ್ಮಂದಿರ ಮತ್ತು ನಿಜ ಮಂದಿರ ಎಂಬ ಹೆಸರುಗಳೂ ಇವೆ.
Advertisement
ಸ್ಥಳಪುರಾಣದ ಪ್ರಕಾರ ಈ ಜಾಗದಲ್ಲಿ 2,500 ವರ್ಷಗಳ ಪುರಾತನ ದೇವಾಲಯ ಇತ್ತು. ಹರಿಗೃಹ (ಶ್ರೀಕೃಷ್ಣನ ಅರಮನೆ) ಇದ್ದ ಜಾಗದಲ್ಲಿ ಅವನ ಮರಿ ಮೊಮ್ಮಗ ವಜ್ರನಾಭ ಮೂಲ ದೇವಾಲಯವನ್ನು ನಿರ್ಮಿಸಿದ. ಆರಂಭದಲ್ಲಿ ದೇವಾಲಯ ಛತ್ರಿಯ ಆಕಾರದಲ್ಲಿತ್ತು. ವರ್ಷಾಂತರಗಳಲ್ಲಿ ಇದು ಅನೇಕಾನೇಕ ಬದಲಾವಣೆಗಳನ್ನು ಕಂಡಿದೆ. ಪಶ್ಚಿಮಾಭಿಮುಖವಾಗಿ ನಿರ್ಮಾಣವಾಗಿರುವ ದ್ವಾರಕಾಧೀಶ ದೇವಾಲಯ ಒಂದು ಸುಂದರ ಭವನ. ಸಮುದ್ರ ಮಟ್ಟದಿಂದ 70 ಅಡಿ ಎತ್ತರದಲ್ಲಿರುವ ಸುಮಾರು 6,000 ಚದರಡಿ ವಿಸ್ತೀರ್ಣದ ದ್ವಾರಕಾಧೀಶ ಮಂದಿರದ ಗರ್ಭಗೃಹಕ್ಕೆ ನಿಜಮಂದಿರ ಅಥವಾ ಹರಿಗೃಹ ಎಂದು ಹೆಸರಿದೆ. ಇದರೊಳಗೆ ಅಂತರಾಳ ಎಂಬ ಗುಪ್ತ ಕೊಠಡಿ ಇದೆ. ಮಂದಿರದ ನಡುವೆ ವಿಶಾಲ ಸಭಾಂಗಣ ಇದೆ.
16ನೇ ಶತಮಾನದಲ್ಲಿ ನಿರ್ಮಾಣವಾದ ದೇವಾಲಯದ ಎರಡು ಗೋಪುರಗಳ ಮೇಲೆ ಸುಂದರ ಶಿಲ್ಪಗಳ ಅಲಂಕಾರವಿದೆ. ಇವುಗಳಲ್ಲಿ 52 ಮೀಟರ್ (170 ಅಡಿ) ಎತ್ತರದ 7 ಮಾಳಿಗೆಗಳ ಹಿರಿಯ ಗೋಪುರಕ್ಕೆ ʻಲಡ್ವಾ ಶಿಖರ್’ ಎಂದು ಹೆಸರು. 157 ಅಡಿ ಎತ್ತರದ, 5 ಮಾಳಿಗೆಗಳ ಕಿರಿಯ ಗೋಪುರಕ್ಕೆ ʻನಿಜಶಿಖರ್’ ಎಂದು ಹೆಸರು.
ಏಳು ಮಾಳಿಗೆಗಳ ಗೋಪುರವನ್ನು 72 ಕಗ್ಗಲ್ಲಿನ ಅಲಂಕೃತ ಸ್ತಂಭಗಳು ಆಧರಿಸಿ ಹಿಡಿದಿವೆ. ಐದು ಮಾಳಿಗೆಗಳ ನಿಜಶಿಖರದ ಆಧಾರವಾಗಿ 60 ಸ್ತಂಭಗಳಿವೆ. ಈ ಗೋಪುರದ ಕೆಳಗೆ ದ್ವಾರಕಾಧೀಶನ ಗರ್ಭಗುಡಿ ಇದೆ. ಭಕ್ತರು 56 ಮೆಟ್ಟಲುಗಳನ್ನು ಹತ್ತಿ ದೇವಾಲಯ ತಲುಪುತ್ತಾರೆ. ಯಾದವ ರಾಜ್ಯದ 52 ಆಡಳಿತ ವಿಭಾಗಗಳು ಮತ್ತು ಕೃಷ್ಣ, ಬಲರಾಮ, ಪ್ರದ್ಯುಮ್ನ ಹಾಗೂ ಅನಿರುದ್ಧರನ್ನು ಈ ಮೆಟ್ಟಲುಗಳು ಸೂಚಿಸುತ್ತವೆ.
ದೇವಾಲಯಕ್ಕೆ ಎರಡು ಮುಖ್ಯದ್ವಾರಗಳಿವೆ. ಮಾರುಕಟ್ಟೆಯತ್ತ ತೆರೆದುಕೊಳ್ಳುವ ಉತ್ತರಾಭಿಮುಖವಾದ ಪ್ರವೇಶದ್ವಾರಕ್ಕೆ ʻಮೋಕ್ಷದ್ವಾರ’ ಎಂದು ಹೆಸರು, ದಕ್ಷಿಣಾಭಿಮುಖವಾದ ಪ್ರವೇಶದ್ವಾರಕ್ಕೆ ʻಸ್ವರ್ಗದ್ವಾರ’ ಎಂದು ಹೆಸರು. ಇದು ಗೋಮತೀ ನದಿಯತ್ತ ತೆರೆದುಕೊಳ್ಳುತ್ತದೆ. ಭಕ್ತರು ಗೋಮತೀ ನದಿಯಲ್ಲಿ ಮುಳುಗೆದ್ದು ಶ್ರೀಕೃಷ್ಣನ ದರ್ಶನಕ್ಕೆ ಹೋಗಬೇಕು ಎಂಬ ನಿಯಮ ಇದೆ.
ಗರ್ಭಗುಡಿಯಲ್ಲಿರುವ ದ್ವಾರಕಾಧೀಶನ ವಿಗ್ರಹ ವಿಷ್ಣುವಿನಂತೆ ಚತುರ್ಭುಜದ್ದಾಗಿದ್ದು, ಶಂಖ, ಚಕ್ರ, ಗದೆ, ಪದ್ಮಗಳನ್ನು ಹಿಡಿದ ತ್ರಿವಿಕ್ರಮ ರೂಪದಲ್ಲಿದೆ. ಪ್ರತಿದಿನ ದ್ವಾರಕಾಧೀಶ ಮೂರ್ತಿಯನ್ನು ವೈಭವೋಪೇತವಾಗಿ ಅಲಂಕರಿಸಲಾಗುತ್ತದೆ. ಶ್ರೀಕೃಷ್ಣ ದ್ವಾರಕೆಯ ರಾಜಕುಮಾರನಾಗಿದ್ದ. ಅವನನ್ನು ಅದೇ ರೀತಿ ಪೂಜಿಸಲಾಗುತ್ತದೆ. ಗರ್ಭಗುಡಿಯ ಹೊರಗೆ ಎಡಭಾಗದ ವೇದಿಕೆಯಲ್ಲಿ ಬಲರಾಮನ ಮೂರ್ತಿ ಇದೆ. ಬಲಭಾಗದಲ್ಲಿ ಪ್ರದ್ಯುಮ್ನ ಮತ್ತು ಅನಿರುದ್ಧ (ಕೃಷ್ಣನ ಮಗ ಮತ್ತು ಮೊಮ್ಮಗ)ರ ವಿಗ್ರಹಗಳಿವೆ.
ಸಭಾಂಗಣದ ಸುತ್ತ ರಾಧಿಕಾ, ಜಾಂಬವತಿ, ಸತ್ಯಭಾಮೆ, ಲಕ್ಷ್ಮೀದೇವಿ, ಬಲರಾಮ, ಪ್ರದ್ಯುಮ್ನ, ಅನಿರುದ್ಧ ಮಾಧವ ರಾವ್ ಜೀ (ಶ್ರೀಕೃಷ್ಣ), ರುಕ್ಕಿಣಿ, ಜುಗಲ್ ಸ್ವರೂಪ್ (ಶ್ರೀಕೃಷ್ಣನ ಇನ್ನೊಂದು ಹೆಸರು), ಶಿವ, ಲಕ್ಷ್ಮೀನಾರಾಯಣ ಮತ್ತು ಸೀತಾದೇವಿಯ ವಿಗ್ರಹಗಳಿರುವ ಪುಟ್ಟ ಗುಡಿಗಳಿವೆ. ದಂತಕಥೆಗಳ ಪ್ರಕಾರ ಶ್ರೀಕೃಷ್ಣನ ಪರಮಭಕ್ತಿ ಮೀರಾಬಾಯಿ ಕೃಷ್ಣನ ಮೂರ್ತಿಯೊಡನೆ ಲೀನವಾಗಿದ್ದು ಇದೇ ದಿವ್ಯ ಮಂದಿರದಲ್ಲಿ ಏಳು ಮಾಳಿಗೆಗಳ ಲಡ್ಡಾ ಶಿಖರ್ ಗೋಪುರದ ಮೇಲಿನ ಧ್ವಜಸ್ತಂಭದಲ್ಲಿ ಸೂರ್ಯ ಮತ್ತು ಚಂದ್ರರ ಚಿತ್ರಗಳಿರುವ ಶ್ರೀಹರಿಧ್ವಜ ಹಾರುತ್ತದೆ. ತ್ರಿಕೋನಾಕೃತಿಯಲ್ಲಿರುವ 50 ಅಡಿ ಅಗಲದ ಧ್ವಜ ಇದು. ಈ ಧ್ವಜವನ್ನು ದಿನಕ್ಕೆ ನಾಲ್ಕು ಬಾರಿ ಬದಲಾಯಿಸಲಾಗುತ್ತದೆ.
ಮುಖ್ಯ ದ್ವಾರಕಾಧೀಶ ದೇವಾಲಯ ತೆರೆದುಕೊಳ್ಳುವುದು ಬೆಳಗ್ಗೆ 6.30ಕ್ಕೆ. ಬೆಳಗ್ಗಿನ ಮಂಗಳಾರತಿಯ ಬಳಿಕ ಮಧ್ಯಾಹ್ನ 1 ಗಂಟೆಯ ತನಕ ದೇವಾಲಯ ತೆರೆದಿರುತ್ತದೆ. ಮಧ್ಯಾಹ್ನ 1 ಗಂಟೆಗೆ ಬಾಗಿಲು ಹಾಕಿದರೆ ಮತ್ತೆ ತೆರೆಯುವುದು ಸಂಜೆ 5 ಗಂಟೆಗೆ. 5ರಿಂದ ರಾತ್ರಿ 9.30ರ ತನಕ ದೇವಾಲಯ ತೆರೆದಿರುತ್ತದೆ. ದ್ವಾರಕೆಗೆ ಚಳಿಗಾಲ ಮತ್ತು ಬೇಸಗೆಯಲ್ಲಿ ಭೇಟಿ ನೀಡಬಹುದು. ಸಮುದ್ರ ಸಾಮೀಪ್ಯದ ಕಾರಣ ಇಲ್ಲಿ ಸಮಶೀತೋಷ್ಣ ವಾತಾವರಣ ಇರುತ್ತದೆ.