ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಭಗವಾನ್ ಶ್ರೀಕೃಷ್ಣನನ್ನು ನಾನಾ ಹೆಸರಿನಿಂದ ಪೂಜಿಸಲಾಗುತ್ತದೆ. ಮಥುರಾ ಅಂಗಳದ ಶ್ರೀ ಕೃಷ್ಣನ ವಿವಿಧ ಹೆಸರಿನ ಮಂದಿರಗಳ ಪರಿಚಯ ಇಲ್ಲಿದೆ.
ಶ್ರೀ ಕೃಷ್ಣ ಜನ್ಮಭೂಮಿ – ಮಥುರಾ
ಮಥುರಾದಲ್ಲಿರುವ ಅತ್ಯಂತ ಪ್ರಸಿದ್ಧ ದೇವಸ್ಥಾನಗಳಲ್ಲಿ ಮಥುರಾದ ಶ್ರೀಕೃಷ್ಣ ದೇವಾಲಯವೂ ಒಂದು. ಶ್ರೀಕೃಷ್ಣ ಜನಿಸಿದ ಜೈಲಿದ್ದ ಜಾಗದಲ್ಲಿಯೇ ದೇಗುಲದ ಗರ್ಭಗೃಹವಿದೆ ಎಂಬುದು ನಂಬಿಕೆಯಿದೆ. ಕೇಶವ ದೇವಾಲಯ, ಗರ್ಭ ಗೃಹ ಮತ್ತು ಭಾಗವತ ಭವನವನ್ನು ಈ ಸಂಕೀರ್ಣ ಒಳಗೊಂಡಿದೆ. ಉತ್ತರ ಪ್ರದೇಶದ ಪ್ರಮುಖ ಧಾರ್ಮಿಕ ಕೇಂದ್ರ ಇದು. ಶ್ರೀಕೃಷ್ಣ ಜನ್ಮಾಷ್ಟಮಿ, ರಾಧಾಷ್ಟಮಿ, ದೀಪಾವಳಿ ಮತ್ತು ಹೋಳಿಯನ್ನು ಈ ದೇಗುಲದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.
ದ್ವಾರಕಾಧೀಶ ದೇವಸ್ಥಾನ
ಮಥುರಾದಲ್ಲಿ ಕಣ್ಮನ ಸೆಳೆಯುವ ಇನ್ನೊಂದು ದೇಗುಲದಲ್ಲಿ ದ್ವಾರಕಾಧೀಶ ದೇವಸ್ಥಾನ ಕೂಡಾ ಒಂದು. 1814ರಲ್ಲಿ ನಿರ್ಮಾಣವಾದ ದೇವಸ್ಥಾನ ಇದು. ಇದು ಕೂಡಾ ಮಥುರಾದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ದೇವಾಲಯ. ಸುಂದರ ವಾಸ್ತುಶಿಲ್ಪ, ಕೆತ್ತನೆಗಳಿಂದ ಈ ದೇಗುಲ ಎಲ್ಲರನ್ನೂ ಸೆಳೆಯುತ್ತದೆ. ಶ್ರೀಕೃಷ್ಣ ಮತ್ತು ರಾಧೆಯ ವಿಗ್ರಹವನ್ನು ಈ ದೇಗುಲದಲ್ಲಿ ನೋಡಬಹುದು. ಇಲ್ಲಿನ ಕೃಷ್ಣನನ್ನು ದ್ವಾರಕಾಧೀಶ ಎಂದು ಕರೆದರೆ, ರಾಧೆಯನ್ನು ರಾಧಾರಾಣಿ ಎಂದು ಕರೆಯಲಾಗುತ್ತದೆ.
ವೃಂದಾವನ – ಗೋವಿಂದ್ ದೇವ್ ದೇಗುಲ
ಮಥುರಾದ ವೃಂದಾವನದಲ್ಲಿರುವ ಅತ್ಯಂತ ಪ್ರಸಿದ್ಧ ದೇವಸ್ಥಾನಗಳಲ್ಲಿ ಗೋವಿಂದ್ ದೇವ್ ದೇಗುಲ ಕೂಡಾ ಒಂದು. ಈ ದೇಗುಲದ ಸೌಂದರ್ಯ ಮತ್ತು ವಾಸ್ತು ವೈಭವಕ್ಕೆ ಹೆಸರುವಾಸಿ. 1590ರಲ್ಲಿ ರಾಜಸ್ಥಾನದ ಜೈಪುರದ ಅಮೇರ್‌ನ ರಾಜ ಭಗವಾನ್ ದಾಸ್ ಅವರ ಪುತ್ರ ರಾಜಾ ಮನ್ ಸಿಂಗ್ ನಿರ್ಮಿಸಿದ ಕೆಂಪು ಕಲ್ಲಿನ ಈ ದೇಗುಲ ಇಂದಿಗೂ ತನ್ನ ವೈಭವವನ್ನು ಹಾಗೆಯೇ ಉಳಿಸಿಕೊಂಡಿದೆ. ಇದನ್ನು ಗೋವಿಂದ್ ಜೀ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಒಂದಷ್ಟು ಬಾರಿ ದಾಳಿಗೊಳಗಾಗಿದ್ದ ಈ ದೇವಸ್ಥಾನವನ್ನು 1873ರಲ್ಲಿ ಮರು ನಿರ್ಮಾಣ ಮಾಡಲಾಗಿತ್ತು. ಇಲ್ಲಿ ಜನ್ಮಾಷ್ಟಮಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ.
ಗೀತಾ ಮಂದಿರ
ಮಥುರಾದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಭೇಟಿ ನೀಡುವ ಸುಂದರ ದೇಗುಲಗಳಲ್ಲಿ ಗೀತಾ ಮಂದಿರ ಕೂಡಾ ಒಂದು. ಬಿರ್ಲಾ ಸಮೂಹ ಸಂಸ್ಥೆಯವರು ನಿರ್ಮಿಸಿದ ದೇವಸ್ಥಾನ. ಇದು ಇಲ್ಲಿನ ಪ್ರಮುಖ ಆಕರ್ಷಣೆ ಕೂಡಾ ಆಗಿದೆ. ಹಿಂದೂ ಧರ್ಮೀಯರ ಪವಿತ್ರ ಗ್ರಂಥವಾದ ಭಗವದ್ಗೀತೆಯನ್ನು ದೇವಾಲಯದ ಗೋಡೆಗಳ ಮೇಲೆ ಕೆತ್ತಲಾಗಿದೆ. ಶ್ರೀಕೃಷ್ಣನ ಭವ್ಯ ಚಿತ್ರಣ, ಅದ್ಭುತ ಉಬ್ಬು ಶಿಲ್ಪಗಳನ್ನೂ ಇಲ್ಲಿ ಕಣ್ತುಂಬಿಕೊಳ್ಳಬಹುದು.