– ಮಸೀದಿ ಜಾಗ ಸಮೀಕ್ಷೆಗೆ ಆಯುಕ್ತರನ್ನು ನೇಮಿಸುವಂತೆ ಆದೇಶಿಸಿದ್ದ ಹೈಕೋರ್ಟ್
ನವದೆಹಲಿ: ಕೃಷ್ಣ ಜನ್ಮಭೂಮಿ ಹಾಗೂ ಶಾಹೀ ಈದ್ಗಾ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಗದ ಸರ್ವೆ ನಡೆಸಲು ಆಯುಕ್ತರನ್ನು ನೇಮಿಸುವಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಶಾಹೀ ಈದ್ಗಾ ಮಸೀದಿ ಜಾಗದ ಸರ್ವೆ ನಡೆಸಲು ಆಯುಕ್ತರನ್ನು ನೇಮಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠವು, ಹೈಕೋರ್ಟ್‌ನಲ್ಲಿ ವಿಚಾರಣೆಯನ್ನು ಮುಂದುವರಿಸಬಹುದು. ಆದರೆ ಉನ್ನತ ನ್ಯಾಯಾಲಯದ ಮುಂದಿನ ವಿಚಾರಣೆಯ ದಿನಾಂಕದ ವರೆಗೆ ಆಯೋಗವನ್ನು ಕಾರ್ಯಗತಗೊಳಿಸಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಸ್ಥಳೀಯ ಆಯುಕ್ತರ ನೇಮಕಕ್ಕೆ ಹೈಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಯು ತುಂಬಾ ಅಸ್ಪಷ್ಟವಾಗಿದೆ. ಪ್ರಕರಣದ ವರ್ಗಾವಣೆಯ ವಿಷಯವೂ ಬರುತ್ತಿದೆ. ಪ್ರಕರಣದಲ್ಲಿ ಪರಿಗಣಿಸಲು ಕೆಲವು ಕಾನೂನು ಪ್ರಶ್ನೆಗಳು ಸಹ ಉದ್ಭವಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.


