– ಹೆಚ್ಚಿನ ಪರಿಹಾರದ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ
– ಇದು ಯಾರ ವೈಫಲ್ಯ ಎಂದು ಹೇಳೊಕ್ಕಾಗಲ್ಲ
ಹಾಸನ: ಮೃತರ ಕುಟುಂಬಸ್ಥರಿಗೆ ನಷ್ಟ ಭರಿಸಲು ಆಗಲ್ಲ, ಸಹಾಯದ ರೀತಿಯಲ್ಲಿ ಸ್ವಲ್ಪ ಪರಿಹಾರ ನೀಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ (Krishna Byre Gowda) ಹೇಳಿದ್ದಾರೆ.
ಜಿಲ್ಲೆಯ ಮೊಸಳೆಹೊಸಳ್ಳಿ ಗ್ರಾಮದಲ್ಲಿ ನಡೆದ ದುರಂತ ಸ್ಥಳಕ್ಕೆ ಭೇಟಿ ನೀಡಿ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೃದಯ ವಿದ್ರಾವಕ ಘಟನೆ ನಡೆದಿದೆ. ಅವಘಡದಲ್ಲಿ ಈವರೆಗೆ 9 ಜನ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರದ ಪರವಾಗಿ ಸಾಂತ್ವನ ಹೇಳಿದ್ದೇನೆ. ಆ ಕುಟುಂಬದ ನೋವು ಅರ್ಥ ಮಾಡಿಕೊಳ್ಳೋದು ಕಷ್ಟ. ಮೃತರ ಕುಟುಂಬಗಳಿಗೆ ನಷ್ಟ ಭರಿಸಲು ಆಗಲ್ಲ, ಹೀಗಾಗಿ ಸ್ವಲ್ಪ ಸಹಾಯದ ರೀತಿಯಲ್ಲಿ ಪರಿಹಾರ ನೀಡಿದ್ದೇವೆ. ತಲಾ 5 ಲಕ್ಷ ರೂ. ಪರಿಹಾರ ಕೊಡುವಂತೆ ಸಿಎಂ ಸೂಚಿಸಿದ್ದಾರೆ. ಅದರಂತೆ ನಾನು 5 ಲಕ್ಷ ರೂ. ಪರಿಹಾರ ಕೊಡುತ್ತಿದ್ದೇನೆ. ಇನ್ನೂ ಹೆಚ್ಚಿನ ಪರಿಹಾರ ಕೇಳುತ್ತಿದ್ದಾರೆ. ಅದರ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಹಾಸನ | ವಿಮಾನ ದುರಂತದಲ್ಲಾದ್ರೆ 1 ಕೋಟಿ ಕೊಡ್ತೀರಿ, ಬಡವರ ಜೀವಕ್ಕೆ ಬೆಲೆ ಇಲ್ವಾ? – ಸಚಿವರಿಗೆ ಜನರ ತರಾಟೆ
ಇನ್ನೂ ಇದು ಯಾರ ವೈಫಲ್ಯ ಎಂದು ಹೇಳೊಕ್ಕಾಗಲ್ಲ. ಹೆಚ್ಚಿನ ಭದ್ರತೆ ನೀಡಿದರೆ ಜನರ ಭಾವನೆಗಳಿಗೆ ಧಕ್ಕೆ ಎನ್ನುತ್ತೀರಾ, ಭದ್ರತೆ ಕಡಿಮೆ ಮಾಡಿದಾಗ ಏನಾದರೂ ಆದರೆ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎನ್ನುತ್ತೀರಾ. ಹೀಗಾಗಿ ವೈಫಲ್ಯದ ಬಗ್ಗೆ ನಾನು ಮಾತಾಡಲ್ಲ. ಈಗಾಗಲೇ ಟ್ರಕ್ ಚಾಲಕನನ್ನು ಬಂಧಿಸಿದ್ದೇವೆ. ಆತ ಇದೇ ಊರಿನವನು, ಅವನಿಗೂ ಗಾಯ ಆಗಿದೆ. ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡುವ ಮುನ್ನ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಸ್ಥಳ ಪರಿಶೀಲನೆ ಕೂಡ ಮಾಡಿದ್ದೇನೆ. ಕೆಲವು ಕುಟುಂಬಗಳ ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಗಾಯಾಳುಗಳ ಆರೈಕೆ ಬಗ್ಗೆಯೂ ವಿಚಾರಿಸಿದ್ದೇನೆ. ಪೊಲೀಸರಿಗೆ ದುರಂತ ಹೇಗಾಯ್ತು ಹಾಗೂ ಡ್ರೈವರ್ ಬಗ್ಗೆ ತನಿಖೆ ಮಾಡುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಜಿಲ್ಲಾಡಳಿತ ತಕ್ಷಣ ಸ್ಪಂದಿಸಿ ಚಿಕಿತ್ಸೆ ನೀಡಿ, ಮೃತರ ವೈದ್ಯಕೀಯ ಪರೀಕ್ಷೆ ತಕ್ಷಣ ಮಾಡಿಸಿದೆ. ರಾತ್ರಿಯೇ ಎಲ್ಲರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಏನಾಯ್ತು? ಹೇಗಾಯ್ತು? ಯಾಕಾಯ್ತು? ಅಂತ ತನಿಖೆಗೆ ಹೇಳಿದ್ದೇನೆ ಎಂದಿದ್ದಾರೆ.ಇದನ್ನೂ ಓದಿ: ಹಾಸನ ದುರಂತ | ಡ್ರೈವರ್‌ಗಳ ತಪ್ಪಿನಿಂದ ಆಕ್ಸಿಡೆಂಟ್ ಆದ್ರೆ, ಸರ್ಕಾರ ಹೇಗೆ ಹೊಣೆ ಆಗುತ್ತೆ? – ಸಿದ್ದರಾಮಯ್ಯ