ಬೆಂಗಳೂರು: ಮೊದಲ ಹಂತದ ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೇ ದಿನ ಆಗಿದ್ದು, ಅಂತಿಮವಾಗಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.
ಮೈತ್ರಿ ಹಿನ್ನೆಲೆಯಲ್ಲಿ ಜೆಡಿಎಸ್‍ಗೆ ಬಿಟ್ಟು ಕೊಡಲಾಗಿದ್ದ ಈ ಕ್ಷೇತ್ರದಲ್ಲಿ ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಸಚಿವ ಕೃಷ್ಣ ಭೈರೇಗೌಡ ಅವರು ಅಭ್ಯರ್ಥಿಯಾಗಿದ್ದು, ನಾಳೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಜಾತಿ ಲೆಕ್ಕಾಚಾರಲ್ಲೂ ಮುಂದಾಗಿರುವ ಕಾಂಗ್ರೆಸ್ ಒಕ್ಕಲಿಗ ಅಭ್ಯರ್ಥಿಯನ್ನೇ ಆಯ್ಕೆ ಮಾಡಿದೆ.
ಹೆಚ್ಚುವರಿ ಕ್ಷೇತ್ರ ಲಭ್ಯವಾದ ಪರಿಣಾಮ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕ್ಷೇತ್ರ ಎಲ್ಲಾ ಜೆಡಿಎಸ್, ಕಾಂಗ್ರೆಸ್ ಶಾಸಕರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಒಮ್ಮತವಾಗಿ ಕೃಷ್ಣಭೈರೇಗೌಡ ಅವರ ಹೆಸರನ್ನು ಅಂತಿಮ ಮಾಡಲಾಗಿದೆ. ಸ್ಪರ್ಧಿಸುವ ಮನಸ್ಸು ಇಲ್ಲದಿದ್ದರು ಕೂಡ ಶಾಸಕರ ಒತ್ತಾಯ ಹಾಗೂ ಸೂಕ್ತ ಅಭ್ಯರ್ಥಿ ಲಭ್ಯವಾದ ಕಾರಣ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಸದಾನಂದಗೌಡ ನಾಮಿನೇಷನ್ ಮಾಡಿದ್ರು. ಬಳಿಕ ಮಾತನಾಡಿದ ಅವರು, ಕ್ಷೇತ್ರದ ಜನ ದೇಶದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಇತರೆ ಪಕ್ಷದ ಸಾಕಷ್ಟು ಕಾರ್ಯಕರ್ತರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕ್ಷೇತ್ರದಲ್ಲಿ ಪಕ್ಷಕ್ಕೆ ಬೆಂಬಲ ನೀಡುವ ವಿಶ್ವಾಸ ಇದೆ ಎಂದು ತಿಳಿಸಿದರು.
ಇತ್ತ ಗೆಲ್ಲುವ ಅವಕಾಶ ಇರುವ ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಗ್ರಾಮಾಂತರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಿಸಿಲ್ಲ. ದಿವಂಗತ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಹೆಸರನ್ನು ರಾಜ್ಯ ಬಿಜೆಪಿ ಶಿಫಾರಸ್ಸು ಮಾಡಿತ್ತು. ಆದರೆ ಹೈಕಮಾಂಡ್ ಮಾತ್ರ ಹೆಚ್ಚಿನ ಒಲವು ತೋರಿಲ್ಲ ಎನ್ನಲಾಗಿದೆ. ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಹಾಗೂ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಹೆಸರು ಸದ್ಯ ಮುನ್ನಲೆಗೆ ಬಂದಿದೆ. ಇನ್ನಷ್ಟೇ ಅಧಿಕೃತ ಅಭ್ಯರ್ಥಿಯ ಘೋಷಣೆ ಆಗುವ ಸಂಭಾವವಿದೆ.