– ಇದು ತಾತನ ಆಸ್ತಿ ಎಂದ ಸಚಿವ
ಬೆಳವಾವಿ: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಮುಡಾ ಸೈಟ್ ಹಗರಣ ಆರೋಪ ಇರುವಾಗಲೇ ಸಂಪುಟದ ಮತ್ತೋರ್ವ ಸಚಿವ ಕೃಷ್ಣಬೈರೇಗೌಡ (Krishna Byre Gowda) ವಿರುದ್ಧ ಅಕ್ರಮವಾಗಿ ಸ್ಮಶಾನ ಜಾಗವನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡ ಆರೋಪ ಕೇಳಿ ಬಂದಿದೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ನಾಯಕರಾದ ಚಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹಾಗೂ ಎನ್ ರವಿಕುಮಾರ್ (N Ravikumar) ಕೋಲಾರ (Kolara) ನರಸಾಪುರ ಹೋಬಳಿಯ ಗರುಡನಪಾಳ್ಯ ಗ್ರಾಮದ ಸರ್ವೆ ನಂ. 47ರಲ್ಲಿ 1 ಎಕರೆ ಜಾಗ, ಸರ್ವೆ 46ರಲ್ಲಿ 20.16 ಎಕರೆ ಜಾಗವನ್ನು ಕಂದಾಯ ಸಚಿವರು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ ಅಂತ ಆರೋಪಿಸಿದ್ದಾರೆ.
ದಾಖಲೆ ಪ್ರಕಾರ ಇದು ಕೆರೆ ಜಮೀನಾಗಿದ್ದು, ಸ್ಮಶಾನಕ್ಕೆ ಬಿಡಲಾಗಿದೆ. ಮೂಲ ದಾಖಲೆಗಳ ಪ್ರಕಾರ ಸರ್ಕಾರಿ ಸ್ಮಶಾನ ಖರಾಬು ಅಂತ ಇದೆ. ಮ್ಯುಟೇಷನ್‌ನಲ್ಲಿಯೂ ಖರಾಬ್ ಅಂತಿದೆ. ಆದರೆ ಈ ಜಮೀನು ಕಂದಾಯ ಸಚಿವರ ಖಾತೆಗೆ ಹೇಗೆ ಬರುತ್ತದೆ ಅಂತ ಚಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ. ಮಿಸ್ಟರ್ ಕ್ಲೀನ್ ಎಂದು ಬಿಂಬಿಸಿಕೊಳ್ಳುವ ಕೃಷ್ಣಬೈರೇಗೌಡ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕೂಡಲಸಂಗಮ ಅಭಿವೃದ್ಧಿ ಮಂಡಳಿ ಯೋಜನೆ ನಮ್ಮ ಕೂಸು, ಮುಗಿಸುವ ಬದ್ಧತೆ ನಮಗಿದೆ: ಕೃಷ್ಣ ಬೈರೇಗೌಡ
ಎನ್.ರವಿಕುಮಾರ್ ಮಾತನಾಡಿ, ಕೆರೆ ಹಾಗೂ ಸ್ಮಶಾನ ಖಾಸಗಿ ವ್ಯಕ್ತಿಗಳ ಹೆಸರಿಗೆ ಮಾಡಿಕೊಳ್ಳಲು ಆಗುವುದಿಲ್ಲ. ಅಲ್ಲಿ ಸಿಲ್ವರ್ ಟೀಕ್ ಬೆಳೆಯುತ್ತಾರಂತೆ. ಇದನ್ನು ತನಿಖೆಗೆ ಒಳಪಡಿಸಬೇಕು ಎಂದು ಹೇಳಿದರು.
ಬಿಜೆಪಿಗರ ಆರೋಪಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿ, ಖರಾಬು, ಸ್ಮಶಾನ ಜಾಗ ಹೌದೋ? ಅಲ್ವೋ ಎಂಬುದು ತನಿಖೆ ಆಗಲಿ. ಬಿಜೆಪಿ ಬಳಿ ಏನು ದಾಖಲೆ ಇದೆ ಕೊಡಲಿ. ಜಿಲ್ಲಾಧಿಕಾರಿಗಳಿಗೆ, ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಕಾವೇರಿ-2, ಇ-ಸ್ವತ್ತು ಡಿಜಿಟಲ್ ಡೇಟಾ ಲಿಂಕ್‌ಗೆ ತ್ವರಿತ ಪರಿಹಾರ: ಕೃಷ್ಣ ಬೈರೇಗೌಡ
ನಮ್ಮ ತಾತ ಕ್ರಯಕ್ಕೆ ತೆಗೆದುಕೊಂಡ ಆಸ್ತಿ ನಮ್ಮ ತಂದೆ ಮೂಲಕ ನಮಗೆ ಬಂದಿದೆ. ಕುಟುಂಬದ ಆಸ್ತಿ ವಿಭಾಗ ಆಗಿ ನನ್ನ ಪಾಲಿಗೆ ಬಂದಿದೆ. 1978ರಲ್ಲಿ ನಾನು ಹುಟ್ಟಿ 5 ವರ್ಷ. ಅದು ನಮ್ಮ ತಾತನವರ ಜಮೀನು. ನಮ್ಮ ತಂದೆಯವರಿಗೆ ಮೂವರು ಗಂಡು ಮಕ್ಕಳಿದ್ದೇವೆ. ಎಲ್ಲರಿಗೂ ಆಸ್ತಿ ವಿಭಾಗವಾಗಿ ನನ್ನ ಪಾಲಾಗಿ ಆ ಜಮೀನು ಬಂದಿದೆ ಎಂದು ತಿಳಿಸಿದರು.
ನಾನೇ ಮಂತ್ರಿ ಆಗಿ ನಾನೇ ತನಿಖೆ ಮಾಡಿಸಿದರೆ ನಾನೇ ಸಚಿವನಾಗಿದ್ದೆ ಎನ್ನುತ್ತಾರೆ. ಲೋಕಾಯುಕ್ತದಂತಹ ಸ್ವತಂತ್ರ ತನಿಖಾ ಸಂಸ್ಥೆ ತನಿಖೆ ನಡೆಸಿ ಸರಿ ತಪ್ಪು ಹೇಳಲಿ. 2000 ಇಸವಿಗೂ ಮೊದಲು ಕೈ ಬರಹ ಇದ್ದಿದ್ದು. ನಾನು ಆ ವೇಳೆ ವಿದೇಶದಲ್ಲಿ ಇದ್ದೆ. ಎಲ್ಲಾ ದಾಖಲೆಗಳನ್ನ ತೆಗೆದು ನೋಡಲಿ. ಕೆಲವರಿಗೆ ಕೆಸರೆರಚಾಟ ಮಾಡುವುದು ವೃತ್ತಿಯಾಗಿದೆ ಎಂದು ತಿರುಗೇಟು ನೀಡಿದರು.

