ದಾವಣಗೆರೆ: ಶಿವಮೊಗ್ಗದ ಎಸ್‍ಟಿ ನಿಗಮದ ಅಧೀಕ್ಷಕನ ಆತ್ಮಹತ್ಯೆಯ ಬೆನ್ನಲ್ಲೆ ದಾವಣಗೆರೆಯಲ್ಲಿ ಕಾಂಟ್ರಾಕ್ಟರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (KRIDL) ದಿಂದ ಬಿಲ್ ಬಾಕಿ ಉಳಿಸಿಕೊಂಡಿದ್ದು, ಹಣ ನೀಡಲು ಅಧಿಕಾರಿಗಳು ಸತಾಯಿಸಿದ್ದರಿಂದ ಮನನೊಂದು ಗುತ್ತಿಗೆದಾರ ನೇಣಿಗೆ ಕೊರಳೊಡ್ಡಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಮತ್ತೊಂದು ಕಂಟಕವಾಗಿ ಪರಿಣಮಿಸಿದೆ.
ಪಿ.ಎಸ್.ಗೌಡರ್ ಮೃತ ಗುತ್ತೆಗೆದಾರ (Contractor). ಸಂತೇಬೆನ್ನೂರಿನ ಐತಿಹಾಸಿನ ಪುಷ್ಕರಣಿಯಲ್ಲಿ ಪ್ರತಿನಿತ್ಯ ಮೀನಿಗೆ ಬ್ರೆಡ್ ನೀಡುತ್ತಿದ್ದ ಗೌಡರ್ ಗುತ್ತಿಗೆದಾರ ಕೂಡ. ಪತ್ನಿ ಗ್ರಾಮ ಪಂಚಾಯ್ತಿ ಸದಸ್ಯೆಯಾಗಿದ್ದು ಶಾಸಕ ಮಾಡಾಳ್ ವಿರೂಪಾಕ್ಷನವರು ಶಾಸಕರಾಗಿದ್ದಾಗ ಶಾಸಕರ ಅನುದಾನದಲ್ಲಿ ಕೆಆರ್‍ಐಡಿಎಲ್ ನಿಗಮದಿಂದ 5 ಲಕ್ಷ ರೂಪಾಯಿ ಮೌಲ್ಯದ ಸಂತೇಬೆನ್ನೂರಿನ ರೈತ ಸಂಪರ್ಕ ಕೇಂದ್ರದ ನೆಲಹಾಸು ಕಾಮಗಾರಿಯನ್ನು ನೀಡಿದ್ದರು.
2023-24 ನೇ ಸಾಲಿನಲ್ಲೇ ಕಾಮಗಾರಿ ಪೂರ್ಣಗೊಂಡಿದ್ದು, ಪಿಎಸ್ ಗೌಡರ್ ಕೆಆರ್ ಐಡಿಎಲ್‍ನಿಂದ ಬಿಲ್‍ಗಾಗಿ ಸಾಕಷ್ಟು ಬಾರಿ ಓಡಾಡಿದ್ದರೂ ಅವರಿಗೆ ಅಧಿಕಾರಿಗಳು ಹಣವನ್ನು ನೀಡಲು ಸತಾಯಿಸಿದ್ದಾರೆ. ಬಿಜೆಪಿಯ ಅಧಿಕಾರವಧಿಯ ಕೊನೆಯ ಕ್ಷಣದಲ್ಲಿ ಮಾಡಿದ್ದ ಕಾಮಗಾರಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಬಿಲ್ ಪಾವತಿಯಾಗಿಲ್ಲ. ಸಾಲಮಾಡಿ ಕಾಮಗಾರಿ ಮಾಡಿದ್ದರಿಂದ ಹೆಂಡತಿ-ಮಕ್ಕಳ ಒಡವೆಗಳನ್ನು ಕೂಡ ಅಡ ಇಟ್ಟಿದ್ದರು. ಇದರಿಂದ ಮನನೊಂದು ಗುತ್ತಿಗೆದಾರ ಪಿಎಸ್ ಗೌಡರ್ ಮೇ 26 ರಂದು ಸಂತೇಬೆನ್ನೂರಿನ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ವಾಲ್ಮಿಕಿ ನಿಗಮದ ಪ್ರಕರಣ CBIಗೆ ವರ್ಗಾಯಿಸುವುದಿಲ್ಲ: ಪರಮೇಶ್ವರ್
5 ಲಕ್ಷ ಬಿಲ್ ಪಾವತಿಯಾಗದೆ ಮನನೊಂದಿದ್ದ ಗೌಡರ್, ಡೆತ್ ನೋಟ್ ನಲ್ಲಿ ಕೆಆರ್ ಐಡಿಎಲ್ ಅಧಿಕಾರಿಗಳ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಆರ್ ಐಡಿಎಲ್ ಇಲಾಖೆಯಿಂದ ದೊಡ್ಡ ಮೊತ್ತದ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ಡೆತ್ ನೋಟ್ ನಲ್ಲಿ ಅವರ ಇಬ್ಬರು ಸಹೋದರರ ಮೇಲೆಯೂ ಹಣಕಾಸಿನ ವಿಚಾರದಲ್ಲಿ ಮೋಸ ಮಾಡಿದ್ದಾರೆಂದು ಗೌಡರ್ ಆರೋಪಿಸಿದ್ದು, ಪಿಎಸ್ ಗೌಡರ್ ಪತ್ನಿ ವಸಂತ ಕುಮಾರಿಯವರಿಂದ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.
ಒಟ್ಟಿನಲ್ಲಿ ಕೆಆರ್ ಐಡಿಎಲ್‍ನಿಂದ ಹಣ ಬಿಡುಗಡೆಯಾಗದೆ ಗುತ್ತಿಗೆದಾರ ನೇಣೀಗೆ ಶರಣಾಗಿದ್ದು ಇದೀಗ ಸರ್ಕಾರಕ್ಕೆ ಮತ್ತೋಂದು ಕಂಟಕ ಎದುರಾದಂತಾಗಿದೆ.