ಕನ್ನಡಕಕ್ಕಾಗಿ ಪರದಾಡಿದ ಸಿದ್ದರಾಮಯ್ಯ

Public TV
1 Min Read
Siddu Spect

ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕನ್ನಡಕಕ್ಕಾಗಿ ಪರದಾಡಿದ ಪ್ರಸಂಗ ಇಂದು ಕೆ.ಆರ್.ಪುರದಲ್ಲಿ ನಡೆದಿದೆ.

ಕೆ.ಆರ್.ಪುರ ಕಾಂಗ್ರೆಸ್ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಪರ ಸಿದ್ದರಾಮಯ್ಯ ಅವರು ತೆರೆದ ವಾಹನದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದರು. ಚೆನ್ನಸಂದ್ರಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಹೂವು, ತುಳಸಿ ಹಾರ ಹಾಕಿದರು. ಬಳಿಕ ಹಾರ ತೆಗೆಯುತ್ತಿದ್ದಾಗ ಸಿದ್ದರಾಮಯ್ಯ ಅವರ ಕನ್ನಡಕ ಹಾರಕ್ಕೆ ಸಿಕ್ಕಿಹಾಕಿಕೊಂಡು ಬಿದ್ದಿತ್ತು.

Siddu Spect A

ಕನ್ನಡಕ ಕೆಳಗೆ ಬೀಳುತ್ತಿದ್ದಂತೆ ಸಿದ್ದರಾಮಯ್ಯ ಅವರು ಹುಡುಕಾಟ ಆರಂಭಿಸಿದರು. ಆಗ ಎಂ.ನಾರಾಯಣಸ್ವಾಮಿ ಅವರು ಹಾರದಲ್ಲಿ ಸಿಲುಕಿದ ಕನ್ನಡಕವನ್ನು ತೆಗೆದುಕೊಟ್ಟರು. ಬಳಿಕ ಕನ್ನಡಕ ಹಾಕಿಕೊಂಡ ಸಿದ್ದರಾಮಯ್ಯ ಅವರು ಭಾಷಣ ಆರಂಭಿಸಿದರು.

ಈ ಚುನಾವಣೆಯನ್ನು ನಾವು ಬಯಸಿರಲಿಲ್ಲ. ಅನಗತ್ಯವಾಗಿ ಬಂದಿದೆ. ಅನರ್ಹ ಶಾಸಕ ಭೈರತಿ ಬಸವರಾಜ್ ಕಾಂಗ್ರೆಸ್‍ನಿಂದ ಎರಡು ಬಾರಿ ಆಯ್ಕೆಯಾಗಿದ್ದರು. ನಾನು ಹೋರಾಟ ಮಾಡಿ ಅವರಿಗೆ ಟಿಕೆಟ್ ಕೊಡಿಸಿದ್ದೆ. ಎರಡು ಬಾರಿ ಗೆದ್ದು ಅಧಿಕಾರ ಅನುಭವಿಸಿ ಲೂಟಿ ಹೊಡೆದರು. ಈಗ ಬಿಜೆಪಿಗೆ ಪಕ್ಷಾಂತರ ಆಗಿದ್ದಾರೆ. ಕಾಂಗ್ರೆಸ್‍ನಲ್ಲಿ ಏನು ಕಡಿಮೆ ಆಗಿತ್ತು ಅಂತ ನೀವು ಕೇಳಬೇಕು ಎಂದು ಸಿದ್ದರಾಮಯ್ಯ ಅವರು, ಮತದಾರರಿಗೆ ಮನವಿ ಮಾಡಿಕೊಂಡರು.

Siddu

ನಾನು ಮುಖ್ಯಮಂತ್ರಿ ಆಗಿದ್ದಾಗ ಕೆ.ಆರ್.ಪುರ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ ಕೊಟ್ಟಿದ್ದೆ. ಭೈರತಿ ಬಸವರಾಜ್ ಅವರನ್ನು ಬೋರ್ಡ್ ಗೆ ಮೆಂಬರ್ ಮಾಡಿದ್ವಿ. ಅನುದಾನ ಪಡೆದು, ಅಧಿಕಾರ ಅನುಭವಿಸಿ ಬಿಜೆಪಿಗೆ ಹೋಗಿದ್ದಾರೆ. ನಿಮಗೆ, ಕಾಂಗ್ರೆಸ್‍ಗೆ ಭೈರತಿ ಮೋಸ ಮಾಡಿದ್ದಾರೆ. ಅಂದು ಎ.ಕೃಷ್ಣಪ್ಪ ಅವರಿಗೆ ಟಿಕೆಟ್ ತಪ್ಪಿಸಿ ಭೈರತಿ ಅವರಿಗೆ ಕೊಟ್ಟೆ. ಅವತ್ತು ಟಿಕೆಟ್ ಕೊಡಿಸಿ ತಪ್ಪು ಮಾಡಿದೆ ಅಂತ ಈಗ ಅನ್ನಿಸುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿಯೂ ಪಕ್ಷಾಂತರಿಗಳನ್ನ ಸೋಲಿಸಬೇಕು. ಜನ ಇಂತಹವರಿಗೆ ಪಾಠ ಕಲಿಸಬೇಕು. ಭೈರತಿ ಬೆದರಿಕೆಗೆ ನಮ್ಮ ಪಕ್ಷದ ಕಾರ್ಯಕರ್ತರು, ಪಾಲಿಕೆ ಸದಸ್ಯರು ಹೆದರುವುದಿಲ್ಲ ಎಂದು ಗುಡುಗಿದರು.

Share This Article
Leave a Comment

Leave a Reply

Your email address will not be published. Required fields are marked *