ಮಂಡ್ಯ: ಸಾರಿಗೆ ಬಸ್ (KSRTC Bus) ಡಿಕ್ಕಿಯಾಗಿ ಕೆಪಿಟಿಸಿಎಲ್ (ಟಿಎಲ್‍ಐ) ಇಂಜಿನಿಯರ್ ಒಬ್ಬರು ಮೃತಪಟ್ಟ ಘಟನೆ ಮಳವಳ್ಳಿ ತಾಲೂಕಿನ ಕಣಿಗಲ್ ಗೇಟ್ ಬಳಿ ನಡೆದಿದೆ.
ಮೃತರನ್ನು ಮಳವಳ್ಳಿ ತಾಲೂಕಿನ ಮಂಚನಹಳ್ಳಿ ಗ್ರಾಮದ ಪಿ.ರವಿ (42) ಎಂದು ಗುರುತಿಸಲಾಗಿದೆ. ಶಿವನಸಮುದ್ರ ಬಳಿಯ ಕೆಪಿಟಿಸಿಎಸ್‍ನ (KPTCL) ವಿಭಾಗದಲ್ಲಿ ಕಿರಿಯ ಇಂಜಿನಿಯರ್ ಆಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಬೈಕ್‍ನಲ್ಲಿ ಮಳವಳ್ಳಿ ಪಟ್ಟಣಕ್ಕೆ ಹೋಗಿ ಮಂಚನಹಳ್ಳಿಗೆ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ. ಇದನ್ನೂ ಓದಿ: ಜನಾಂಗೀಯ ನಿಂದನೆ ಹೇಳಿಕೆ ನೀಡಿದ್ದ ಸ್ಯಾಮ್ ಪಿತ್ರೋಡಾ ಈಗ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ
ವಾಪಸ್ ಆಗುತ್ತಿದ್ದ ವೇಳೆ ಮಳೆ ಬಂದ ಕಾರಣ ರವಿಯವರು ರಾಷ್ಟ್ರೀಯ ಹೆದ್ದಾರಿ-209ರ ಕಣಿಗಲ್ ಗೇಟ್ ಬಳಿ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಮರವೊಂದರ ಕೆಳಗೆ ಹಣ್ಣು ಖರೀದಿಗೆ ತೆರಳಿದ್ದರು. ಈ ವೇಳೆ ಮಳವಳ್ಳಿಯಿಂದ ಚಾಮರಾಜನಗರಕ್ಕೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಪಿ.ರವಿ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ಪಿಎಸ್‍ಐ ಶ್ರವಣ ದಾಸರಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ – ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ