ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯ ಕೆಲ ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದ ಅಂತಾರಾಷ್ಟ್ರೀಯ ಬುಕ್ಕಿಯನ್ನು ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಹರ್ಯಾಣ ಮೂಲದ ಪಿ ಸಯ್ಯಮ್ ಬಂಧಿತ ಆರೋಪಿಯಾಗಿದ್ದು, ಬವೇಶ್ ಬಪ್ನಾ ನೆರವಿನಿಂದ ಸಯ್ಯಮ್ ಮ್ಯಾಚ್ ಫಿಕ್ಸಿಂಗ್ ಮಾಡಲು ಯತ್ನಿಸಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಆತನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿ ವೆಸ್ಟ್ ಇಂಡೀಸ್‍ನಲ್ಲಿ ಬಂಧನ ಮಾಡಿದ್ದಾರೆ.
Advertisement
Advertisement
ಇತ್ತೀಚೆಗಷ್ಟೇ ಕೆಪಿಎಲ್ ಟೂರ್ನಿಯ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ನಾಯಕ ಸಿಎಂ ಗೌತಮ್ ಹಾಗೂ ಆಟಗಾರ ಅಬ್ರಾರ್ ಖಾಜಿರನ್ನು ಪೊಲೀಸರು ಬಂಧಿಸಿದ್ದರು. 2019ರ ಕೆಪಿಎಲ್ ಆವೃತ್ತಿಯ ಫೈನಲ್ ಪಂದ್ಯದ ಬ್ಯಾಟಿಂಗ್ ಸಂದರ್ಭದಲ್ಲಿ ಗೌತಮ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದರು. ಇದಕ್ಕೆ 20 ಲಕ್ಷ ರೂ. ಹಣ ಪಡೆದಿದ್ದರು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದರು. ಸದ್ಯ ಇವರೊಂದಿಗೆ ಸಂಪರ್ಕದಲ್ಲಿದ್ದ ಬುಕ್ಕಿಯನ್ನು ಬಂಧನ ಮಾಡಿರುವ ಪೊಲೀಸರು ಪ್ರಕರಣದ ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
Advertisement
ಫಿಕ್ಸಿಂಗ್ ವಿಚಾರದಲ್ಲಿ ಸಿಸಿಬಿ ಪೊಲೀಸರಿಗೆ ಹಲವು ಆಟಗಾರರ ಮೇಲೆ ಅನುಮಾನ ಮೂಡಿದ್ದು, ಈ ಕುರಿತ ಆಧಾರಗಳನ್ನು ಕಲೆ ಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆಟಗಾರರ ಈ ಕಳ್ಳಾಟ ಬಯಲಾದ ಪರಿಣಾಮ ಕೆಎಸ್‍ಸಿಎ ಹಾಗೂ ಬಿಸಿಸಿಐ ಕಳಂಕವನ್ನು ಎದುರಿಸಿದೆ. ಈಗಾಗಲೇ ಬಂಧನವಾಗಿರುವ ಆಟಗಾಟರರನ್ನು ಸಮಿತಿ ಎಲ್ಲಾ ಮಾದರಿ ಕ್ರಿಕೆಟಿನಿಂದ ಅಮಾನತು ಮಾಡಿದೆ.
Advertisement
ಬಳ್ಳಾರಿ ತಂಡದ ನಾಯಕರಾಗಿದ್ದ ಸಿಎಂ ಗೌತಮ್ ಭಾರತ ಪರ ‘ಎ’ ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲದೇ ಕರ್ನಾಟಕ ಹಾಗೂ ಗೋವಾ ತಂಡಗಳ ಪರ ಆಡಿದ್ದರು. ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ, ಮುಂಬೈ ಇಂಡಿಯನ್ಸ್, ಡೆಲ್ಲಿ ತಂಡಗಳ ಪರ ಆಡಿದ್ದರು. 2019ರ ಕೆಪಿಎಲ್ ಟೂರ್ನಿಯಲ್ಲಿ ಕ್ರಿಕೆಟಿಗ ನಿಶಾಂತ್ ಸಿಂಗ್ ಶೇಖಾವತ್‍ರನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ದೊರೆತ ಮಾಹಿತಿ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲಾಗಿತ್ತು.