ಬೆಂಗಳೂರು: ಯಾವ ಪರಿವಾರ ಈ ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದೆಯೋ, ಆ ಮನೆತನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಹೇಳಿಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಖಂಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗಾಂಧಿ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಯಾವ ಪರಿವಾರ ಈ ದೇಶಕ್ಕಾಗಿ ರಕ್ತ, ಬಲಿದಾನ ಕೊಟ್ಟಿದೆ. ಹೀಗಾಗಿ ಆ ಪರಿವಾರದ ಬಗ್ಗೆ ಮೋದಿ ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.
Advertisement
ಗಾಂಧಿ ಪರಿವಾರ ಈ ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದೆ. ಅವರು ಮನೆಯನ್ನು ಇಂದು ದೇಶಕ್ಕಾಗಿ ಹರಾಜು ಮಾಡಿಕೊಂಡಿದ್ದಾರೆ. ಅಂತಹ ಪರಿವಾರ, ನಾಯಕರ ಬಗ್ಗೆ ಇವತ್ತು ಒಬ್ಬ ಪ್ರಧಾನ ಮಂತ್ರಿಯಾಗಿ ಇಂತಹ ಹೇಳಿಕೆಗಳನ್ನು ಕೊಡುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಹೀಗಾಗಿ ಅವರ ಮಾತನ್ನು ಖಂಡಿಸುತ್ತೇನೆ ಎಂದು ಮೋದಿ ವಿರುದ್ಧ ಕಿಡಿಕಾರಿದ್ದಾರೆ.
Advertisement
ಮೋದಿ ಹೇಳಿದ್ದೇನು?
ಶನಿವಾರ ರಾತ್ರಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‍ನಲ್ಲಿ ಪ್ರಧಾನಿ ಜೊತೆಗಿನ ಸಂವಾದದ ವೇಳೆ ಡೆಹ್ರಾಡೂನ್‍ನ ವಿದ್ಯಾರ್ಥಿನಿಯೊಬ್ಬಳು ಡೈಲೆಕ್ಸಿಕ್ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಅಂದರೆ ಓದು-ಬರಹದ ಕಲಿಕೆ ನಿಧಾನಗತಿಯಲ್ಲಿರುವ ಮಕ್ಕಳಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆ. ತಾರೇ ಜಮೀನ್ ಪರ್ ಸಿನಿಮಾದಲ್ಲಿ ನೋಡಿದಂತೆ ಈ ಮಕ್ಕಳು ಅತ್ಯಂತ ಬುದ್ಧಿವಂತರು ಮತ್ತು ಸೃಜನಶೀಲರು ಆಗಿರುತ್ತಾರೆ ಎಂದು ಹೇಳಿದಳು.
Advertisement
Advertisement
ಈ ವೇಳೆ ಮಧ್ಯಪ್ರವೇಶಿಸಿದ ಪ್ರಧಾನಿ ಮೋದಿ 40-50 ವರ್ಷದ ಮಕ್ಕಳಿಗೂ ಈ ಕಾರ್ಯಕ್ರಮ ಉಪಯೋಗ ಆಗುತ್ತಾ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಾಲೆಳೆದರು. ಮೋದಿ ಅವರ ಈ ಉತ್ತರ ಕೇಳಿ ಅಲ್ಲಿ ಕುಳಿತ್ತಿದ್ದ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿದರು. ಬಳಿಕ “ಆಗುತ್ತೆ ಸರ್” ಎಂದು ವಿದ್ಯಾರ್ಥಿನಿ ಮೋದಿ ಅವರಿಗೆ ಉತ್ತರಿಸಿದ್ದಳು. ವಿದ್ಯಾರ್ಥಿನಿಯಿಂದ ಈ ಉತ್ತರ ಬಂದ ಕೂಡಲೇ “ಅಂಥ ಮಕ್ಕಳ ತಾಯಂದಿರು ತುಂಬಾ ಖುಷಿ ಆಗಬಹುದು” ಎಂದು ಹೇಳಿದರು. ಮಕ್ಕಳ ಕಲಿಕೆಯ ಸಮಸ್ಯೆಯನ್ನೂ ರಾಜಕೀಯಕ್ಕಾಗಿ ತಮಾಷೆ ಮಾಡಿದ ಮೋದಿ ಎಷ್ಟು ಸರಿ ಎಂದು ಪ್ರಶ್ನಿಸಿ ನೆಟ್ಟಿಗರು ಈಗ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv