ಹಾಸನ: ಮಾಜಿ ಸಚಿವ ಎ.ಮಂಜು ಅವರು ಬಂಡಾಯವೆದ್ದು ಮೈತ್ರಿ ಅಭ್ಯರ್ಥಿ ವಿರುದ್ಧ ಬಿಜೆಪಿಯಿಂದ ಕಣಕ್ಕೆ ಇಳಿದಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ನಡುವೆ ತಂದೆ ಬಿಜೆಪಿಗೆ ಪಕ್ಷಾಂತರ ಮಾಡಿದ್ದರೂ ಕೂಡ ಕಾಂಗ್ರೆಸ್ ಪಕ್ಷದಲ್ಲೇ ಉಳಿದಿದ್ದ ಎ.ಮಂಜು ಅವರ ಪುತ್ರ ಮಂಥರ್ ಗೌಡರನ್ನು ಯೂತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದೆ.
ಹಾಸನ ಜಿಲ್ಲಾ ಪಂಚಾಯತ್ ಸದಸ್ಯರಾಗಿರುವ ಮಂಥರ್ ಗೌಡ ಅವರು ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರು ಆಗಿದ್ದರು. ಸದ್ಯ ಮಂಥರ್ ರನ್ನು ಕೆಪಿಸಿಸಿ ವಜಾಗೊಳಿಸಿದ ಪರಿಣಾಮ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನವನ್ನು ಎ.ಮಂಜು ಪುತ್ರನ ಬದಲಿಗೆ ಜಿಲ್ಲಾ ಕಾಂಗ್ರೆಸ್ ನಾಯಕ ಬಿ.ಶಿವರಾಂ ಪುತ್ರ ಕೆಂಪರಾಜು ಅವರನ್ನು ನೇಮಿಸಿದೆ.
ಮಂಜು ಅವರ ಪುತ್ರರನ್ನು ವಜಾಗೊಳಿಸುವ ಮೂಲಕ ಕೆಪಿಸಿಸಿ ಮೈತ್ರಿ ಧರ್ಮವನ್ನು ಪಾಲನೆ ಮಾಡಿದೆ. ವಜಾ ಮಾಡುವ ಮುನ್ನ ಕೆಪಿಸಿಸಿ ಮಂಥರ್ ಅವರಿಂದ ಚುಣಾವಣೆಯಲ್ಲಿ ಯುವ ಕಾಂಗ್ರೆಸ್ ನಿಂದ ಯಾವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲದೇ ಸಕ್ರೀಯವಾಗಿ ಮೈತ್ರಿ ಅಭ್ಯರ್ಥಿ ಪರ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳದ ಬಗ್ಗೆ ವಿವರಣೆ ನೀಡುವಂತೆ 24 ಗಂಟೆಗಳ ಅವಧಿಯಲ್ಲಿ ಉತ್ತರ ನೀಡಲು ನೋಟಿಸ್ ನೀಡಿತ್ತು. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.