ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದ ಮಾಜಿ ಸಚಿವ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನನಗೆ ಬೆಂಬಲ ಕೊಡಿ ಅಂತ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ನೀವು ಬೆರಳಲ್ಲಿ ತೋರಿಸಿದ್ದನ್ನ ಕೈ ಹಿಡಿದು ಮಾಡ್ತೀನಿ ಅನ್ನೋ ಮನವಿ ಮೂಲಕ ನನಗೆ ಬೆಂಬಲ ಕೊಡಿ ಅಂತ ಡಿಕೆ ಶಿವಕುಮಾರ್ ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸತತ ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿ ಸಿದ್ದರಾಮಯ್ಯರನ್ನ ಮನವೊಲಿಸೋಕೆ ಡಿಕೆ ಶಿವಕುಮಾರ್ ಪ್ರಯತ್ನ ಪಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಸಮ್ಮತಿ ಸೂಚಿಸುವ ಲಕ್ಷಣ ಇದೆ. ಈ ಹಂತದಲ್ಲಿ ದಯವಿಟ್ಟು ನನಗೆ ಸಹಕಾರ ಕೊಡಿ. ನೀವೇ ನಮ್ಮ ನಾಯಕರು ಎನ್ನುವುದರಲ್ಲಿ ಯಾವುದೇ ಭಿನ್ನಾಭಿಪ್ರಾಯ ನನಗಿಲ್ಲ. ನಿಮ್ಮ ಜೊತೆ ಸುದೀರ್ಘವಾದ ವಿಶ್ವಾಸದಿಂದ ಕೆಲಸ ಮಾಡುವುದಕ್ಕೆ ನಾನು ಸಿದ್ಧ. ನೀವು ಬೆರಳಲ್ಲಿ ತೋರಿಸಿದ್ದನ್ನು ಕೈ ಹಿಡಿದು ಮಾಡುವಷ್ಟು ನಂಬಿಕೆ ಇಡಿ. ದಯವಿಟ್ಟು ಕೆಪಿಸಿಸಿ ಅಧ್ಯಕ್ಷನಾಗುವುದಕ್ಕೆ ನಿಮ್ಮ ಸಹಕಾರ ಬೇಕು ಅಂತ ನೇರವಾಗಿ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಕೆ ಶಿವಕುಮಾರ್ ಮಾತಿಗೆ ಸಿದ್ದರಾಮಯ್ಯ ಕೂಡಾ ನಾಜೂಕಾಗಿಯೇ ಉತ್ತರ ಕೊಟ್ಟಿದ್ದಾರೆ. ಯಾರೇ ಕೆಪಿಸಿಸಿ ಆಧ್ಯಕ್ಷರಾಗುವುದಕ್ಕೆ ನನ್ನ ವಿರೋಧ ಇಲ್ಲ. ನಾನು ಯಾರು ಕೆಪಿಸಿಸಿ ಅಧ್ಯಕ್ಷರಾಗುವುದಕ್ಕ ಅಡ್ಡಿಪಡಿಸಿಲ್ಲ. ನೀವು ಅಧ್ಯಕ್ಷರಾಗುವುದಕ್ಕೂ ನಾನು ತಕರಾರು ಮಾಡಿಲ್ಲ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳಲಿದೆಯೋ ಅದರ ಪ್ರಕಾರ ನಡೆಯೋಣ ಅಂತ ಡಿಕೆಶಿಗೆ ಹೇಳಿ ಕಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.