ಉಡುಪಿ: ಕಾಂಗ್ರೆಸ್ ಹೈಕಮಾಂಡ್ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಹೆಚ್ಚು ತಡ ಮಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಉಡುಪಿಯ ಕೃಷ್ಣ ಮಠದಲ್ಲಿ ಪರ್ಯಾಯ ಮಹೋತ್ಸವದಲ್ಲಿ ಭಾಗವಹಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎಲ್ಲರ ವಿಶ್ವಾಸವನ್ನು ಪಡೆದು ಸಮಾಲೋಚನೆ ಮಾಡಿ ನೂತನ ಅಧ್ಯಕ್ಷರನ್ನು ಶೀಘ್ರ ತೀರ್ಮಾನ ಮಾಡಬೇಕು. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ದೇಶದಲ್ಲಿ ದೊಡ್ಡ ಮಟ್ಟದ ಹೋರಾಟ ಸಂಘಟಿಸಬೇಕಾಗಿದೆ. ಇದಕ್ಕೆ ಎಲ್ಲರ ಸಹಮತ, ಒಮ್ಮತ ಮುಖ್ಯವಾಗುತ್ತದೆ. ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರ ಅಭಿಪ್ರಾಯ ಪಡೆದು ಪಕ್ಷದ ಹೈಕಮಾಂಡ್ ಸರಿಯಾದ ತೀರ್ಮಾನ ಮಾಡುವುದು ಬಹಳ ಮುಖ್ಯ ಎಂದರು.
ದಾರಿ ತಪ್ಪಿಸುತ್ತಿರು ಶಾ:
ಪೌರತ್ವ ತಿದ್ದುಪಡೆ ಕಾಯ್ದೆ ಕುರಿತು ಮಾತನಾಡಿದ ಅವರು, ಇದು ಕೇಂದ್ರ ಸರ್ಕಾರದ ಕಾನೂನು. ಆದರೆ ಅನೇಕ ರಾಜ್ಯಗಳು ತಿರಸ್ಕಾರ ಮಾಡಿವೆ. ಸುಪ್ರೀಂಕೋರ್ಟ್ ಮುಂದೆಯೂ ಸಿಎಎ ವಿಚಾರ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಭಾಷಣದ ಮೂಲಕ ರಾಜ್ಯದ ಜನತೆಯ ದಾರಿ ತಪ್ಪಿಸಿದ್ದಾರೆ. ಯಾರಿಗೂ ಪೌರತ್ವ ಕೊಡುವುದು ಬೇಡ ಅಂತ ನಾವು ಹೇಳುತ್ತಿಲ್ಲ. ಧರ್ಮದ ಆಧಾರದಲ್ಲಿ ವಿಭಜನೆ ಮಾಡಬೇಡಿ. ಒಂದು ಸಮುದಾಯವನ್ನು ಟಾರ್ಗೆಟ್ ಮಾಡುವುದು ಸಂವಿಧಾನ ವಿರೋಧಿ ಎಂದು ಹೇಳಿದರು.
ಅಮಿತ್ ಶಾ ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸುತ್ತಿದ್ದಾರೆ. ಒಮ್ಮೆ ಎನ್‍ಆರ್‍ಸಿ ಮಾಡುತ್ತೇವೆ ಎನ್ನುತ್ತಾರೆ. ಇನ್ನೊಮ್ಮೆ ಇಲ್ಲ ಅಂತಾರೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಭಾಷಣ ಮಾಡಿದರೆ ಪ್ರಯೋಜನ ಇಲ್ಲ. ದೇಶದಲ್ಲಿ ಘರ್ಷಣೆ, ಗಲಭೆ ಆಗಬೇಕು ಅಂತ ಇದ್ದರೆ ಕಾನೂನು ಜಾರಿ ಮಾಡಿ ಎಂದು ಆಗ್ರಹಿಸಿದರು.