ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಸಿದ್ಧಪಡಿಸಿರುವ ಪರಿಷ್ಕೃತ ಪಠ್ಯಪುಸ್ತಕಗಳ ವಿರುದ್ಧ, ಬೆಂಗಳೂರಿನಲ್ಲಿಂದು ಹಲವು ಸಂಘಟನೆಗಳು ಬೃಹತ್ ಪ್ರತಿಭಟನೆಯನ್ನ ನಡೆಸಿವೆ. ಈ ಪ್ರತಿಭಟನೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸಾಥ್ ಕೊಟ್ಟಿದ್ದು, ಸರ್ಕಾರ ವಿರುದ್ಧ ಕಿಡಿಕಾರಿದ್ರು.
Advertisement
ಪರಿಷ್ಕೃತ ಪಠ್ಯಪುಸ್ತಕಗಳ ವಿವಾದ ತಾರಕಕ್ಕೇರಿದೆ. ಕುವೆಂಪು ಪಠ್ಯದಲ್ಲಿನ ಲೋಪ ವಿರೋಧಿಸಿ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಆಕ್ರೋಶ ಸ್ಫೋಟವಾಗಿದೆ. ಇಂದು ಬೆಂಗಳೂರಿನಲ್ಲಿ ರೋಹಿತ್ ಚಕ್ರತೀರ್ಥರನ್ನ ಕೂಡಲೇ ಬಂಧಿಸಬೇಕು. ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದ್ರು. ಈ ಸಭೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸಾಥ್ ನೀಡಿದ್ರು. ವೇದಿಕೆಯ ಮೇಲೆ ಪರಿಷ್ಕೃತ ಪಠ್ಯಪುಸ್ತಕದ ಕಾಪಿಯನ್ನ ಡಿಕೆ ಶಿವಕುಮಾರ್ ಹರಿದು ಹಾಕಿ ಸರ್ಕಾರದ ವಿರುದ್ಧ ಗುಡುಗಿದ್ರು. ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೆಗೌಡರು ಕೂಡ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ್ರು.
Advertisement
Advertisement
ಪಠ್ಯ ಪರಿಷ್ಕರಣೆಯ ಹೆಸರಿನಲ್ಲಿ ಶಿಕ್ಷಣವನ್ನು ಕೇಸರಿಕರಣ ಮಾಡಲಾಗುತ್ತಿದೆ. ಕುವೆಂಪು ಸೇರಿದಂತೆ ಗಣ್ಯರಿಗೆ ಅವಮಾನ ಮಾಡಲಾಗುತ್ತಿದೆ. ಇದಕ್ಕೆ ಕಾರಣರಾಗಿರುವ ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ರನ್ನ ಕೂಡಲೇ ಬಂಧಿಸಬೇಕು. ಸಮಿತಿಯಿಂದ ವಜಾಗೊಳಿಸಬೇಕು ಅಂತ ಕನ್ನಡ ಸಂಘಟನೆಗಳು, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ನಗರದ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಫ್ರೀಡಂಪಾರ್ಕ್ ತನಕ ರ್ಯಾಲಿಯನ್ನ ಮಾಡಿ, ಸರ್ಕಾರದ ವಿರುದ್ಧ ಆಕ್ರೋಶವನ್ನ ಹೊರ ಹಾಕಿದ್ರು. ಇದನ್ನೂ ಓದಿ; ಅಗ್ನಿಫಥ್‌ನಿಂದ ಹೆಚ್ಚಿದ ಕಿಚ್ಚು- ನಾಲ್ಕೇ ದಿನಗಳಲ್ಲಿ 200 ಕೋಟಿ ಆಸ್ತಿ ನಷ್ಟ
Advertisement
ಕೆಪಿಸಿಸಿ ಅಧ್ಯಕ್ಷರಾದ @DKShivakumar
ಅವರು, ಕುವೆಂಪು, ಬಸವಣ್ಣ, ಅಂಬೇಡ್ಕರ್ ಸೇರಿದಂತೆ ನಾಡಿನ ದಾರ್ಶನಿಕರು, ಮಹಾನ್ ಚೇತನಗಳಿಗೆ ಅಪಮಾನ ಮಾಡಿ, ಇತಿಹಾಸ ತಿರುಚಿರುವ ಪಠ್ಯಪುಸ್ತಕ ಪರಿಷ್ಕರಣೆ ರದ್ದುಗೊಳಿಸಿ ಹಿಂದಿನ ಪಠ್ಯಕ್ರಮ ಮುಂದುವರೆಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದರು. pic.twitter.com/qcjH8Sk76k
— Karnataka Congress (@INCKarnataka) June 18, 2022
ಪಠ್ಯಪುಸ್ತಕ ಪರಿಷ್ಕರಣೆ ವಾಪಸ್ ಪಡೆಯಲು ಸರ್ಕಾರಕ್ಕೆ 10 ದಿನಗಳ ಗಡುವು ಕೊಡ್ತೇವೆ ಅಂತ ಹೋರಾಟಗಾರರು ಸರ್ಕಾರಕಕ್ಕೆ ಎಚ್ಚರಿಸಿದ್ದಾರೆ. ಯಾವುದಕ್ಕೂ ಬಗ್ಗದ ಶಿಕ್ಷಣ ಸಚಿವರು, ಯಾವ್ದೇ ಕಾರಣಕ್ಕೂ ಪಠ್ಯಪುಸ್ತಕ ಪರಿಷ್ಕರಣೆ ವಾಪಸ್ ಪಡೆಯಲ್ಲ. ಸಲಹೆಗಳಿದ್ರೆ ಕೊಡಬಹುದು, ಸ್ವೀಕರಿಸ್ತೇವೆ. ಯಾವ ದಾರ್ಶನಿಕರಿಗೂ ಅವಮಾನ ಮಾಡಿಲ್ಲ ಅಂತ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ. ಕುವೆಂಪು ಅವ್ರ ಹೆಚ್ಚುವರಿ ಪಠ್ಯ ಸೇರಿಸೋದು ನಮ್ಮ ಸರ್ಕಾರ. ರಾಜಕೀಯ ಮಾಡಲು ಪಠ್ಯಪುಸ್ತಕವನ್ನ ಬಳಸಿಕೊಳ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ರಾಜಕೀಯಕ್ಕಾಗಿ ಪ್ರತಿಭಟನೆ ಮಾಡ್ತಿದೆ. ಯಾವ್ದೇ ಕಾರಣಕ್ಕೂ ಪಠ್ಯ ಪುಸ್ತಕ ವಾಪಸ್ ಪಡೆಯೋಲ್ಲ ಅಂತ ಖಡಕ್ಕಾಗಿ ಹೇಳಿದ್ದಾರೆ.
ಪಠ್ಯ ಪರಿಷ್ಕರಣೆಯ ವಿರುದ್ಧದ ಹೋರಾಟದಲ್ಲಿ ಮಠಾಧೀಶರು, ಚಿಂತಕರು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್, ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಸೇರಿದಂತೆ ಹಲವರು ಭಾಗಿಯಾಗಿ, ಸರ್ಕಾರದ ವಿರುದ್ಧ ಗುಡುಗಿದ್ರು. ಅದೇನೇ ಆಗ್ಲಿ, ಈ ವಿವಾದ ಎಲ್ಲಿಗೆ ಹೋಗಿ ಮುಟ್ಟುತ್ತೆ. ಯಾವಾಗ ಈ ವಿವಾದಕ್ಕೆ ಇತೀಶ್ರೀ ಸಿಗುತ್ತೆ ಅನ್ನೋದನ್ನಕಾದು ನೋಡಬೇಕಿದೆ.
Live Tv