ಬೆಳಗಾವಿ: ಶಾಸಕರೊಬ್ಬರ ಸಂತೃಪ್ತಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಎಂಇಎಸ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಅನಗೋಳದ ಕನಕದಾಸ ಕಾಲೋನಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ಸಚಿವರು ಇಂದು ಭೇಟಿ ನೀಡಿದರು. ಅನಗೋಳದ ಕನಕದಾಸ ಕಾಲೋನಿಯಲ್ಲಿ ರಾಯಣ್ಣ ಪ್ರತಿಮೆಗೆ ಹಾರ ಹಾಕಿ ನಮನ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಇದೇ ವೇಳೆ ಡಿಕೆಶಿ ಮತ್ತು ಸಿದ್ದರಾಮಯ್ಯ ದ್ವಂದ್ವ ಹೇಳಿಕೆ ಬಗ್ಗೆ ಕಿಡಿಕಾರಿದ ಈಶ್ವರಪ್ಪ, ಸದನದೊಳಗೆ ಎಂಇಎಸ್ ನಿಷೇಧ ಮಾಡಲು ಸಿದ್ದರಾಮಯ್ಯ ಒತ್ತಾಯ ಮಾಡುತ್ತಾರೆ. ಹೊರಗೆ ಡಿಕೆಶಿ ಎಂಇಎಸ್ ಪರ ಬ್ಯಾಟ್ ಬೀಸುತ್ತಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದ ಜನರ ಮನವೊಲಿಸಲು ಡಿಕೆಶಿ ದ್ವಂದ್ವ ಹೇಳಿಕೆ ನೀಡುತ್ತಾರೆ. ಕೃತ್ಯದ ಹಿಂದೆ ಯಾವ ಸಂಘಟನೆ ಇದೆ. ಯಾವ ರಾಜಕೀಯ ಶಕ್ತಿ ಇದೆ ಎನ್ನುವ ಬಗ್ಗೆ ತನಿಖೆ ಮಾಡುತ್ತೇವೆ, ಯಾರನ್ನು ಕೂಡ ಬಿಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದೆ: ಡಿಕೆಶಿ
Advertisement
Advertisement
ಕಾಂಗ್ರೆಸ್ ನಲ್ಲಿ ಎರಡು ಧ್ವನಿ ಇದೆ. ಡಿಕೆಶಿದೊಂದು ಸಿದ್ದರಾಮಯ್ಯದೊಂದು ಧ್ವನಿ ಇದೆ. ಎಂಇಎಸ್ ಗೂ ಕೃತ್ಯಕ್ಕೆ ಸಂಬಂಧ ಇಲ್ಲವೆಂದು ಡಿಕೆಶಿ ಹೇಳೋ ಮೂಲಕ ವಿವಾದ ಮಾಡುತ್ತಿದ್ದಾರೆ. ಶಾಸಕರೊಬ್ಬರ ಸಂತೃಪ್ತಿಗೆ ಡಿಕೆಶಿ ಎಂಇಎಸ್ ಪರ ಬ್ಯಾಟಿಂಗ್ ಮಾಡ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಎಂಇಎಸ್ ಬೆಂಬಲ ಪಡೆಯಲು ಈ ರೀತಿ ಹೇಳುತ್ತಿದ್ದಾರೆ. ಜೀವಂತವಾಗಿದ್ದೇವೆ ಎಂದು ತೋರಿಸಲು ಸಂಘಟನೆ ಈ ರೀತಿಯ ಕೃತ್ಯ ಎಸಗುತ್ತಿದ್ದಾರೆ. ಉತ್ತರ ಪ್ರದೇಶದ ಮಾದರಿಯಲ್ಲಿ ಈ ದುಷ್ಕೃತ್ಯ ಮಾಡೋರಿಗೆ ಗುಂಡು ಹಾಕಿ ಸಾಯಿಸಬೇಕು ಎಂದು ತಿಳಿಸಿದರು.
Advertisement
Advertisement
ರಾಯಣ್ಣ ಮತ್ತು ಶಿವಾಜಿ ಬಗ್ಗೆ ಗೊತ್ತಿಲ್ಲದ ಕೆಲ ಅಲ್ಪರು ಅವರ ವಿರುದ್ಧ ಕೀಳಾದ ಕೃತ್ಯ ಎಸಗುತ್ತಾರೆ. ಗಡಿಪಾರು, ದೇಶದ್ರೋಹ ಅಲ್ಲ ಉತ್ತರಪ್ರದೇಶದಲ್ಲಿ ಮಾಡಿದಂತೆ ಗುಂಡು ಹಾರಿಸಬೇಕು. ಗುಂಡು ಹಾರಿಸೋ ಬಗ್ಗೆ ಸದನದಲ್ಲಿ ಹೇಳಿದ್ದೇನೆ, ಇಲ್ಲಿಯೂ ಹೇಳ್ತೇನೆ. ಹಾಗೆ ಮಾಡಿದ್ರೆ ಈ ರೀತಿಯ ಕೃತ್ಯಕ್ಕೆ ಕಡಿವಾಣ ಬೀಳುತ್ತದೆ. ಜನಾಪೇಕ್ಷೆ ಮೇರೆಗೆ ಸುವರ್ಣ ಸೌಧದ ಮುಂಭಾಗದಲ್ಲಿ ಚೆನ್ನಮ್ಮ ಮತ್ತು ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಹಳ್ಳ ಸೇರುತ್ತಿದೆ ಉಮೇಶ್ ಕತ್ತಿ ಮಾಲೀಕತ್ವದ ಸಕ್ಕರೆ ಕಾರ್ಖಾನೆ ತ್ಯಾಜ್ಯ ನೀರು
ಮನೆಯಲ್ಲಿ ಯಾವುದೇ ಭಾಷೆ ಮಾತನಾಡಲಿ, ರಾಜ್ಯದಲ್ಲಿ ಇರೋರು ಎಲ್ಲರೂ ಕನ್ನಡಿಗರು. ಎಂಇಎಸ್ ಪುಂಡರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಸರ್ಕಾರ ಗಂಭೀರವಾಗಿದೆ. ರಾಜಕೀಯ ಪಕ್ಷ, ಸಂಘಟನೆ, ರಾಜಕೀಯ ಮುಖಂಡರು ಯಾರೇ ಇರಲಿ ಬಿಡೋದಿಲ್ಲ. ಮಹಾರಾಷ್ಟ್ರ ಹೇಡಿತನದ ಸಮಿತಿಯಾಗಿದೆ ಹಗಲಲ್ಲಿ ಕೃತ್ಯ ಮಾಡಿದ್ರೆ ಕನ್ನಡಿಗರು ಅವರನ್ನು ಚಿಂದಿ ಚಿಂದಿ ಮಾಡ್ತಿದ್ರು. ಖಂಡನಾ ನಿರ್ಣಯ ಸದನದಲ್ಲಿ ತೆಗೆದುಕೊಳ್ಳಲಾಗಿದೆ. ಸಂಘಟನೆ ನಿಷೇಧ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡ್ತೇವೆ ಎಂದು ಹೇಳಿದರು.