ಬೆಂಗಳೂರು: 2028ರ ಚುನಾವಣೆಗೆ ಸಜ್ಜಾಗುವಂತೆ ಪರಾಜಿತ ಅಭ್ಯರ್ಥಿಗಳಿಗೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಸೂಚನೆ ನೀಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ (Election) ಸೋತಿರುವ ಕ್ಷೇತ್ರಗಳ ಪೈಕಿ ಸುಮಾರು 60 ಕ್ಷೇತ್ರಗಳಲ್ಲಿ ಕಾಂಗ್ರೆಸ್ (Congress) ಪಕ್ಷ ಗೆಲ್ಲುವ ಸಾಧ್ಯತೆಗಳಿವೆ ಎಂದು ನಮ್ಮ ಆಂತರಿಕ ಸಮೀಕ್ಷೆಗಳು ವರದಿ ನೀಡಿವೆ. ಈ ಹಿನ್ನೆಲೆಯಲ್ಲಿ ಪರಾಜಿತ ಅಭ್ಯರ್ಥಿಗಳ ಕಷ್ಟ ಆಲಿಸಿ, ಮುಂದಿನ 2028ರ ಚುನಾವಣೆಗೆ ಸಜ್ಜಾಗಿ ಎಂದು ಸೂಚನೆ ನೀಡಲಾಗಿದೆ ಡಿಕೆಶಿ ಹೇಳಿದರು.
ಪರಾಜಿತ ಅಭ್ಯರ್ಥಿಗಳ ಜತೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ನಾವು ಸೋತಿದ್ದ 86 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಕರೆಸಿ ಅವರ ಕಷ್ಟ ಆಲಿಸಿ, ಮುಂದಿನ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇವೆ. ಪರಾಜಿತ ಅಭ್ಯರ್ಥಿಗಳು ಸುಮ್ಮನೆ ಕೂರದೇ ಕಾರ್ಯಪ್ರವೃತ್ತರಾಗಬೇಕು ಎಂದು ಮಾರ್ಗದರ್ಶನ ನೀಡಲಾಗಿದೆ ಎಂದರು. ಇದನ್ನೂ ಓದಿ: ಪತ್ನಿ ನೀಡಿದ ಅರ್ಜಿಯಲ್ಲಿ ವೈಟ್ನರ್ ಬಳಕೆ ಮಾಡಿದ್ದು ತಿಳಿದಿಲ್ಲ: ಲೋಕಾ ಪೊಲೀಸರಿಗೆ ಸಿಎಂ ನೀಡಿದ ಉತ್ತರದಲ್ಲಿ ಏನಿದೆ?
ಎಐಸಿಸಿ (AICC) ಜತೆ ಚರ್ಚೆ ಮಾಡಿ ಪಕ್ಷಕ್ಕೆ ಹಿನ್ನಡೆ ಇರುವ ಉಳಿದ 20 ಕ್ಷೇತ್ರಗಳಲ್ಲಿ ಪಕ್ಷವನ್ನು ಯಾವ ರೀತಿ ಕಟ್ಟಬೇಕು ಎಂದು ಕಾರ್ಯಯೋಜನೆ ಸಿದ್ಧಪಡಿಸುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದವರು ಹಾಗೂ ಸೋತವರನ್ನು ಮತ್ತೊಂದು ದಿನ ಕರೆದು ಸಭೆ ಮಾಡಲಿದ್ದೇನೆ. ಚುನಾವಣೆಯಲ್ಲಿ ಸೋತ ನಂತರ ಇವರು ಲೋಕಸಭೆ ಚುನಾವಣೆ, ಸಹಕಾರಿ ಸಂಘಗಳ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಶಕ್ತಿ ತುಂಬಲು ಸಲಹೆ ನೀಡಲಾಗಿದೆ. ಮುಂದಿನ ಅಧಿವೇಶನ ನಡೆಯುವಾಗ ನಾನು ಹಾಗೂ ಮುಖ್ಯಮಂತ್ರಿಗಳು ಪರಾಜಿತ ಅಭ್ಯರ್ಥಿಗಳನ್ನು ಕರೆಸಿ ಚರ್ಚೆ ಮಾಡಲು ದಿನಾಂಕ ನಿಗದಿಪಡಿಸಲಾಗುವುದು ಎಂದಿದ್ದಾರೆ.