ಬೆಂಗಳೂರು: ಕೂಸು ಹುಟ್ಟುವ ಮೊದಲೇ ಕುಲಾವಿ ಏಕೆ ಅಂತ ಸ್ವೀಟ್ ಕೊಡಲು ಹೋದವ ಎಂ.ಸಿ ವೇಣುಗೋಪಾಲ್ ಮೇಲೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಿಟ್ಟಾಗಿದ್ದಾರೆ.
ವಿಧಾನಪರಿಷತ್ ನಾಮನಿರ್ದೇಶನ ಆಗುವ ಖುಷಿಯಲ್ಲಿ ವೇಣುಗೋಪಾಲ್ ಅವರು ಗುಂಡೂರಾವ್ ಅವರಿಗೆ ಸ್ವೀಟ್ ನೀಡಲು ಹೋಗಿದ್ದ ಸಂದರ್ಭದಲ್ಲಿ ಅವರು ಗರಂ ಆಗಿದ್ದಾರೆ. ಹೀಗಾಗಿ ಸ್ವೀಟ್ ಕೊಟ್ಟು ಸಂಭ್ರಮಿಸಲು ಹೋದ ವೇಣುಗೋಪಾಲ್ ಅವರಿಗೆ ನಿರಾಶೆ ಕಾದಿದೆ.
ವಿಧಾನ ಪರಿಷತ್‍ಗೆ ನಾಮನಿರ್ದೇಶನಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಸುಳಿವು ನೀಡಿತ್ತು. ಆಕಾಂಕ್ಷಿ ಆಗಿರುವ ಎಂ.ಸಿ ವೇಣುಗೋಪಾಲ್ ಹೆಸರು ಅಂತಿಮ ಅನ್ನೋ ಸುದ್ದಿ ಕೇಳಿಬಂದಿತ್ತು. ಇದೇ ಖುಷಿಯಲ್ಲಿ ಎಂ.ಸಿ.ವೇಣುಗೋಪಾಲ್ ಅವರು ಗುಂಡೂರಾವ್ ಅವರಿಗೆ ಸಿಹಿ ನೀಡಲು ಹೋಗಿದ್ದರು. ಈ ವೇಳೆ ಗುಂಡೂರಾವ್ ಸಿಡಿಮಿಡಿಗೊಂಡಿದ್ದಾರಂತೆ.
ಈಗಲೇ ನೀವು ಸ್ವೀಟ್ ಕೊಟ್ಕೊಂಡು ಓಡಾಡಿ. ಅಮೇಲೆ ಹೆಚ್ಚು ಕಮ್ಮಿ ಆದ್ರೆ ಏನ್ಮಾಡ್ತೀರಿ. ಈಗಾಗಲೇ ಪಕ್ಷದೊಳಗೆ ಸಾಕಷ್ಟು ಅಸಮಾಧಾನಗಳು ಇವೆ. ಇದು ಇನ್ನಷ್ಟು ಹೆಚ್ಚಾಗಬೇಕಾ? ಎಐಸಿಸಿಯಿಂದ ಹೆಸರು ಅಂತಿಮ ಆಗುವ ತನಕ ಸುಮ್ಮನೆ ಇರಿ. ಸ್ವೀಟ್ ಹಂಚಬೇಡಿ ಅಂತ ಸಿಟ್ಟಿನಿಂದಲೇ ಗುಂಡೂರಾವ್ ಅವರು ವೇಣುಗೋಪಾಲ್‍ಗೆ ಸಲಹೆ ನಿಡಿದ್ದಾರೆ ಅಂತ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಎಂ.ಸಿ.ವೇಣುಗೋಪಾಲ್ ಅವರು ಡಿಸಿಎಂ ಜಿ.ಪರಮೇಶ್ವರ್ ಅವರ ಪರಮಾಪ್ತರಾಗಿದ್ದು, 2013ರಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv