ಬೆಂಗಳೂರು: ಶಾಸಕರ ಆತುರ ಅರ್ಥ ಆಗುತ್ತಿಲ್ಲ. ಕೋಳಿನೇ ಹುಟ್ಟಿಲ್ಲ ಈಗಲೇ ರೋಷನ್ ಬೇಗ್ ಅವರು ಕಬಾಬ್ ತಿನ್ನೋಕೆ ಹೋಗುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ದಿ.ರಾಜೀವ್ ಗಾಂಧಿಯವರ 28ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಎಕ್ಸಿಟ್ ಪೋಲ್ ನಂತೆ ಫಲಿತಾಂಶ ಬಂದರೆ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರೇ ನೇರ ಕಾರಣ ಎಂಬ ಬೇಗ್ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಅವರು, ಅಲ್ಪಸಂಖ್ಯಾತರು ಅಂದರೆ ಅವರೊಬ್ಬರೇ ಅಲ್ಲ. ಅವರಿಗೆ ಸಚಿವ ಸ್ಥಾನ ಕೊಡದಿರುವುದು ಅಲ್ಪಸಂಖ್ಯಾತರಿಗೆ ಆದ ಮೋಸವೇ? ಬೇರೆಯವರಿಗೆ ಟಿಕೆಟ್ ಕೊಟ್ಟರೆ ಅದು ಅಲ್ಪಸಂಖ್ಯಾತರಿಗೆ ಮಾಡಿದ ಮೋಸವೇ? ಇವರನ್ನ ಸಚಿವರನ್ನಾಗಿ ಮಾಡದೆ ಬೇರೆಯವರನ್ನು ಸಚಿವರನ್ನಾಗಿ ಮಾಡಿದರೆ ಅಲ್ಪ ಸಂಖ್ಯಾತರಿಗೆ ಮಾಡುವ ಮೋಸವೇ ಎಂದು ಪ್ರಶ್ನಿಸಿ ಎಂದು ಗರಂ ಆದರು.
ಅವರ ಹಿರಿತನಕ್ಕೆ ಎಕ್ಸಿಟ್ ಪೋಲ್ ನೋಡಿ ಪ್ರತಿಕ್ರಿಯೆ ಮಾಡೋದಲ್ಲ. ಅವರು ತಾಳ್ಮೆಯಿಂದ ಇರಬೇಕಿತ್ತು. ಅವರು ಪ್ರತಿಕ್ರಿಯಿಸಿದ್ದು ಸರಿಯಲ್ಲ. ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದು ರೋಷನ್ ಬೇಗ್‍ಗೆ ಟಾಂಗ್ ನೀಡಿದರು.
ಇದೇ ವೇಳೆ ಪರಮೇಶ್ವರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಪಕ್ಷದ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ತಾಯಿ ಸಮಾನವಾಗಿದೆ. ನಮ್ಮ ಮನೆಯಲ್ಲಿ ಹೇಗೆ ತಾಯಿ ನೋಡಿಕೊಳ್ಳುತ್ತೇವೆ ಹಾಗೆ ಪಕ್ಷವನ್ನು ನೊಡಿಕೊಳ್ಳಬೇಕು. ಪಕ್ಷದ ಶಿಸ್ತನ್ನು ಪಾಲಿಸದ ನಾಯಕರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಹೇಳುವ ಮೂಲಕ ಶಾಸಕ ರೋಶನ್ ಬೇಗ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಇಂದು ಯುವಕರಿಗೆ ರಾಜೀವ್ ಗಾಂಧಿಯವರ ಕೊಡುಗೆ ತಿಳಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ರಾಷ್ಟ್ರದಲ್ಲಿ ಬಿಜೆಪಿ ಹೊರತು ಪಡಿಸಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಮೋದಿ ಅವರು ಚುನಾವಣಾ ಸಂದರ್ಭದಲ್ಲಿ ರಾಜೀವ್ ಬಗ್ಗೆ ಹೇಳಿದ ಮಾತು ತಮ್ಮ ಕೀಳು ಮಟ್ಟದ ಮನಸ್ಥಿತಿಯನ್ನು ತೋರಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಶಾಶ್ವತ ಅಲ್ಲ. ಅವರು ಒಂದು ದಿನ ಅಧಿಕಾರ ಕಳೆದುಕೊಂಡಾಗ ಅವರಿಗೆ ಗೊತ್ತಾಗುತ್ತದೆ ಅಂದರು.