– ಪ್ರಗತಿ ಪರ ಚಿಂತನೆ ಇಲ್ಲದ ಪಕ್ಷ ಬಿಜೆಪಿ
ಬೆಂಗಳೂರು: ಸನಾತನ ಧರ್ಮದ ಹೆಸರಿನಲ್ಲಿ ಮತ್ತು ಬಲಪಂಥೀಯ ಹೆಸರಿನಲ್ಲಿ ಉಗ್ರವಾದ ಮಾಡುವವರು, ಪ್ರಗತಿಪರ ಚಿಂತನೆ ಇಲ್ಲದವರು ಬಿಜೆಪಿ, ಆರ್ ಎಸ್‍ಎಸ್ ನವರು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ದೇವರಾಜ ಅರಸು 103ನೇ ಜನ್ಮದಿನಾಚರಣೆ ಹಾಗೂ ರಾಜೀವ್ ಗಾಂಧಿಯವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ನಮ್ಮ ಸರ್ಕಾರ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮಹಾರಾಷ್ಟ್ರದಲ್ಲಿ ಹತ್ಯೆಯಾದ ದಾಬೋಲ್ಕರ್ ಮತ್ತು ಪನ್ಸಾರೆ ಆರೋಪಿಗಳ ಬಗ್ಗೆ ಬಿಜೆಪಿಯವರು ಒಂದು ಮಾತನ್ನು ಮಾತಾಡಲ್ಲ. ಇವರು ಸಹ ಒಂದು ರೀತಿಯ ಭಯೋತ್ಪಾದಕರಂತೆ ಎಂದು ಟೀಕಿಸಿದರು.
ಸನಾತನ ಧರ್ಮದ ಹೆಸರಿನಲ್ಲಿ ಮತ್ತು ಬಲಪಂಥೀಯ ಹೆಸರಿನಲ್ಲಿ ಉಗ್ರವಾದ ಮಾಡುವವರು, ಪ್ರಗತಿಪರ ಚಿಂತನೆ ಇಲ್ಲದವರು ಬಿಜೆಪಿ, ಆರ್ ಎಸ್‍ಎಸ್ ನವರು. ಗೌರಿ ಲಂಕೇಶ್ ಹತ್ಯೆಯ ಹಿಂದೆ ಯಾರು ಇದ್ದಾರೆ ಎಂಬುವುದು ಒಂದೊಂದೇ ಹೆಸರುಗಳು ಬೆಳಕಿಗೆ ಬರುತ್ತಿದೆ. ಅಂದು ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಸಿದ್ದರಾಮಯ್ಯ ಸರ್ಕಾರ ಎಸ್‍ಐಟಿ ನೀಡಿದ್ದಾಗ ಹಲವರು ವಿರೋಧಿಸಿದರು. ಆದ್ರೆ ಅದೇ ಎಸ್‍ಐಟಿ ಅಧಿಕಾರಿಗಳ ತನಿಖೆಯಿಂದಾಗಿ ಎಂ.ಎಂ.ಕಲ್ಬುರ್ಗಿ, ದಾಬೋಲ್ಕರ್, ಪನ್ಸಾರೆ ಪ್ರಕರಣಗಳ ಆರೋಪಿಗಳು ಪತ್ತೆಯಾಗಿದ್ದಾರೆ ಎಂದರು.
ಪ್ರಗತಿ ಪರ ಚಿಂತಕರ ಕೊಲೆಗಳ ಬಗ್ಗೆ ಬಿಜೆಪಿ ಅವರು ಮಾತನಾಡೋದಿಲ್ಲ. ಬಲಪಂಥೀಯ, ಹಿಂದೂತ್ವವಾದ ಎಂಬ ಉಗ್ರವಾದಕ್ಕೆ ಬಿಜೆಪಿ ಮತ್ತು ಆರ್ ಎಸ್‍ಎಸ್ ಪೋಷಣೆ ನೀಡುತ್ತಿದೆ. ಅದೇ ಒಬ್ಬ ಮುಸ್ಲಿಂ ವ್ಯಕ್ತಿಯ ಹೆಸರು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕೇಳಿ ಬಂದಿದ್ದರೆ, ಪ್ರತಿ ದಿನ ಟಿವಿಗಳಲ್ಲಿ ಚರ್ಚೆ ಆಗುತ್ತಿತ್ತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಂತಿಮ ದರ್ಶನ ಪಡೆಯಲು ಬಂದಿದ್ದ ಸ್ವಾಮಿ ಅಗ್ನಿವೇಶ್ ಹಲ್ಲೆ ನಡೆಯಿತು. ಬಿಜೆಪಿ ವಿರುದ್ಧ ಯಾರು ಮಾತನಾಡುತ್ತಾರೆ ಅವರನ್ನ ಟಾರ್ಗೆಟ್ ಮಾಡಿ ಹಲ್ಲೆ ಮಾಡ್ತಾರೆ ಎಂದು ಆರೋಪಿಸಿದರು.
ಪುಷ್ಪನಮನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ವಿ.ಆರ್ ಸುದರ್ಶನ್, ಮಾಜಿ ಸಚಿವ ಹೆಚ್ ಆಂಜನೇಯ, ಶಾಸಕ ಬೈರತಿ ಸುರೇಶ್, ಮಾಜಿ ಸಚಿವೆ ಮೊಟಮ್ಮ ಭಾಗಿಯಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv