ಚುನಾವಣೆಗೆ ಸಮೀಪದಲ್ಲಿ ಡಿಕೆಶಿಗೆ ಶಾಕ್ – 5 ವರ್ಷದಲ್ಲಿ ಎಷ್ಟು ಆಸ್ತಿ ಹೆಚ್ಚಾಗಿತ್ತು? ತನಿಖೆ ಎಲ್ಲಿಯವರೆಗೆ ಬಂದಿದೆ?

Public TV
2 Min Read
DK SHIVAKUMAR 3

ಬೆಂಗಳೂರು: ಚುನಾವಣೆ ಹೊತ್ತಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ(DK Shivakumar) ಮತ್ತೆ ಭೂಕಂಟಕ ಎದುರಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣ ಡಿಕೆಗೆ ಉರುಳಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

ಏಪ್ರಿಲ್-ಮೇ ಒಳಗೆ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ(Karnataka Election) ನಡೆಯಲಿದೆ. ಬಹುತೇಕ ಫೆಬ್ರವರಿ ವೇಳೆಯಲ್ಲಿ ಸಿಬಿಐ(CBI) ದೋಷಾರೋಪಪಟ್ಟಿ ಸಲ್ಲಿಕೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಚುನಾವಣಾ ವರ್ಷದಲ್ಲಿ ಬಿಜೆಪಿ ಇದನ್ನೇ ಲಾಭ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಎಫ್‍ಐಆರ್‌ ಅಲ್ಲಿ 75 ಕೋಟಿ ರೂ. ಅಕ್ರಮ ಆಸ್ತಿ ಅಂತ ಸಿಬಿಐ ಉಲ್ಲೇಖಿಸಿದ್ದು, ಮೌಲ್ಯ ಮಾಪನದಿಂದ ಮತ್ತಷ್ಟು ಮಾಹಿತಿ ಹೊರ ಬರುವ ಸಾಧ್ಯತೆಯಿದೆ.

 

ಮತ್ತೆ ನೋಟಿಸ್‌:
ಬೆನ್ನಿಗಾನಹಳ್ಳಿ ಡಿನೋಟಿಫಿಕೇಶನ್ ಕೇಸ್ ಕೆದಕಿರುವ ಸಿಬಿಐ ದೂರುದಾರ ಇಬ್ರಾಹಿಂಗೆ ಮತ್ತೆ ನೋಟಿಸ್ ನೀಡಿದೆ. ಗುರುವಾರ ಸಂಜೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಈಗಾಗಲೇ ಒಂದು ಬಾರಿ ವಿಚಾರಣೆ ಎದುರಿಸಿರುವ ಇಬ್ರಾಹಿಂ ಡಿಕೆಶಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು.

ಇಬ್ರಾಹಿಂ ಈ ಹಿಂದೆ ಸರಿಯಾದ ದಾಖಲೆ ಕೊಡದ ಹಿನ್ನೆಲೆಯಲ್ಲಿ ಸುಪ್ರೀಂನಲ್ಲಿ ಹಿನ್ನಡೆ ಅನುಭವಿಸಿದ್ದರು. ಅಬ್ರಾಹಂಗೆ 25 ಲಕ್ಷ ರೂ. ದಂಡ ವಿಧಿಸಿದ ಬಳಿಕ ಪ್ರಕರಣ ವಾಪಸ್‌ ಪಡೆಯಲಾಗಿತ್ತು. ಈಗ ಡಿನೋಟಿಫಿಕೇಷನ್ ಮಾಹಿತಿ ಪಡೆಯಲು ಸಿಬಿಐ ಮುಂದಾಗಿದೆ.

 

ರಾಜಕೀಯ ಪ್ರೇರಿತ ದಾಳಿ:
ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಆರೋಪ ಪ್ರಕರಣ ಸಂಬಂಧ ಗ್ಲೋಬಲ್ ಕಾಲೇಜಿನ ಆಸ್ತಿಯ ಮೌಲ್ಯಮಾಪನವನ್ನು ಸಿಬಿಐ ನಡೆಸಿವೆ. ಎರಡು ತಿಂಗಳ ಹಿಂದೆ ಡಿಕೆಶಿ ಸ್ವಗ್ರಾಮ ದೊಡ್ಡಾಲಹಳ್ಳಿ ಮತ್ತು ಕನಕಪುರದ ನಿವಾಸಕ್ಕೆ ತೆರಳಿದ್ದ ತನಿಖಾಧಿಕಾರಿಗಳು ಜಮೀನಿನ ಮೌಲ್ಯಮಾಪನ ನಡೆಸಿ ದಾಖಲೆ ಪತ್ರ ಪರಿಶೀಲಿಸಿದ್ದರು. ಈಗ ಗ್ಲೋಬಲ್ ಕಾಲೇಜಿನ ಮೇಲೆ ದಾಳಿ ನಡೆಸಿ, ಕಾಲೇಜಿನ ವಹಿವಾಟು ದಾಖಲೆಗಳನ್ನು ಪರಿಶೀಲಿಸಿದೆ. ಇದನ್ನೂ ಓದಿ: ಭೂತಕೋಲದಲ್ಲಿ ನಟಿ ಅನುಷ್ಕಾ ಶೆಟ್ಟಿ ಭಾಗಿ

ಈ ಬಗ್ಗೆ ಪಬ್ಲಿಕ್ ಟಿವಿಗೆ ಜೊತೆ ಮಾತನಾಡಿದ ಡಿಕೆಶಿ, ನನ್ನ ಮೇಲೆ ತನಿಖಾ ಸಂಸ್ಥೆಗಳಿಗಿಂತ ಸರ್ಕಾರಕ್ಕೆ ಪ್ರೀತಿ ಜಾಸ್ತಿ. ಟ್ರಸ್ಟಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ನನ್ನನ್ನು ನಂಬಿದವರಿಗೂ ಕಿರುಕುಳ ಆಗುತ್ತಿದೆ. ಇದು ರಾಜಕೀಯ ಪ್ರೇರಿತ ದಾಳಿ ಎಂದು ಕಿಡಿಕಾರಿದ್ದಾರೆ.

ಆರೋಪ ಏನು?
ಸಿದ್ದರಾಮಯ್ಯ ಸರ್ಕಾರದಲ್ಲಿ ಇಂದನ ಸಚಿವರಾಗಿದ್ದಾಗ ಡಿಕೆಶಿ ಕೋಟ್ಯಂತರ ರೂ. ಅಕ್ರಮ ಆಸ್ತಿ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. 2013ರ ಅಫಿಡವಿಟ್‍ನಲ್ಲಿ 33.92 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಡಿಕೆಶಿ ಘೋಷಿಸಿದ್ದರು. 2018ರ ಅಫಿಡವಿಟ್‍ನಲ್ಲಿ ಚರಾಸ್ತಿ ಮೌಲ್ಯ 162.53 ಕೋಟಿ ರೂ.ಗೆ ಏರಿಕೆಯಾಗಿತ್ತು.

2013 ರಿಂದ 2018ರ ಅವಧಿಯಲ್ಲಿ 74.93 ಕೋಟಿ ರೂ. ಅಕ್ರಮ ಆಸ್ತಿ ಸಂಪಾದನೆಯಾಗಿದೆ. 5 ವರ್ಷದಲ್ಲಿ 44.93% ಆಸ್ತಿಯ ಅಸಮತೋಲನ ಪತ್ತೆಯಾದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ 2020ರ ಅ.3 ರಂದು ಎಫ್‍ಐಆರ್ ದಾಖಲಾಗಿತ್ತು. ಎಫ್‍ಐಆರ್ ಆಧರಿಸಿ ಡಿಕೆಶಿ ಆಸ್ತಿಯನ್ನು ಸಿಬಿಐ ತನಿಖೆ ನಡೆಸುತ್ತಿದೆ. ಡಿಕೆಶಿ, ಕುಟುಂಬಸ್ಥರು, ಆಪ್ತರ ಆಸ್ತಿ ಮಾಹಿತಿ ಸಂಗ್ರಹಿಸಿ ಮೌಲ್ಯಮಾಪನ ಮಾಡುತ್ತಿರುವ ಸಿಬಿಐ ತನಿಖೆ ಈಗ ಕೊನೆ ಹಂತಕ್ಕೆ ಬಂದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *