ಚಿಕ್ಕೋಡಿ: ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿರುವ ಕೊಯ್ನಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.
ಭಾನುವಾರ 10 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಡುಗಡೆ ಮಾಡಿದ್ದ ಕೊಯ್ನಾ ಆಡಳಿತ ಮಂಡಳಿ ಸದ್ಯ 40 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ನೀರು ಬಿಡುಗಡೆ ಹಿನ್ನೆಲೆಯಲ್ಲಿ ಕೃಷ್ಣಾ ನದಿ ನೀರಿನಲ್ಲಿ ಏರಿಕೆಯಾಗಿದ್ದು, ಯಡೂರು – ಕಲ್ಲೋಳ ಸೇತುವೆ ಜಲಾವೃತಗೊಂಡಿದೆ. ಈಗಾಗಲೇ ಕೃಷ್ಣಾ ನದಿ ತೀರದ ಜನರಿಗೆ ಎಚ್ಚರಿಕೆ ವಹಿಸಲು ಬೆಳಗಾವಿ ಜಿಲ್ಲಾಡಳಿತ ಸೂಚಿಸಿದೆ. ಇದನ್ನೂ ಓದಿ: ಕ್ಯಾಪ್ಟನ್ ಪಟ್ಟದಿಂದ ಇಳಿಯಲಿದ್ದಾರೆ ಕೊಹ್ಲಿ, ರೋಹಿತ್‍ಗೆ ನಾಯಕತ್ವ
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿದರೆ ಮತ್ತೆ ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಆತಂಕ ಎದುರಾಗಲಿದೆ. 105 ಟಿಎಂಸಿ ಸಾಮರ್ಥ್ಯದ ಕೊಯ್ನಾ ಜಲಾಶಯ 104 ಟಿಎಂಸಿಗಳಷ್ಟು ಭರ್ತಿಯಾಗಿದೆ. ಸದ್ಯ ಕೊಯ್ನಾ ಜಲಾಶಯದ ಪ್ರದೇಶದಲ್ಲೂ ಹೆಚ್ಚಿನ ಮಳೆಯಾಗುತ್ತಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ ಎನ್ನುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಅದರ ಜೊತೆಗೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲೂ ಮಳೆಯಾಗುತ್ತಿರುವ ಕಾರಣ ಕೃಷ್ಣಾ ನದಿ ನೀರಿನ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ. ಇದನ್ನೂ ಓದಿ: ರಿಟರ್ನ್ ಟಿಕೆಟ್ ಬುಕ್ ಮಾಡಿದ್ದ ಎಮ್ಮಾ ರಾಡುಕಾನು ಯುಎಸ್ ಓಪನ್ ಚಾಂಪಿಯನ್