– ಗ್ರಾಹಕರು ಆತಂಕಪಡಬೇಕಿಲ್ಲ, 19 ಕೋಟಿ ಇನ್ಶೂರೆನ್ಸ್ ಇದೆ ಎಂದು ಅಭಯ
– ಬ್ಯಾಂಕ್ ಸೈರನ್ ಸರಿ ಇದೆ, ರಾತ್ರಿ ಮಾತ್ರ ಕೆಲಸ ಮಾಡುತ್ತೆ
ಮಂಗಳೂರು: ದರೋಡೆಕೋರರು 11 ಲಕ್ಷ ಹಣ, ಬ್ಯಾಂಕ್‌ನ ಬಹುಪಾಲು ಚಿನ್ನ ದೋಚಿದ್ದಾರೆ, ಆದ್ರೆ ಗ್ರಾಹಕರು ಆತಂಕ ಪಡಬೇಕಿಲ್ಲ 19 ಕೋಟಿ ರೂ. ವಿಮೆ ಇದೆ ಎಂದು ಕೋಟೆಕಾರ್ ಸಹಕಾರಿ ಬ್ಯಾಂಕ್ ಅಧ್ಯಕ್ಷ (Kotekaru Bank President) ಕೃಷ್ಣ ಶೆಟ್ಟಿ ಅಭಯ ನೀಡಿದ್ದಾರೆ.
ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ. ಗ್ರಾಹಕರು ಆತಂಕ ಪಡಬೇಕಿಲ್ಲ 19 ಕೋಟಿ ರೂ. ವಿಮೆ ಇದೆ. ಗ್ರಾಹಕರ ಹಣ, ಚಿನ್ನಕ್ಕೆ ಏನೂ ಆಗೋದಿಲ್ಲ.. ಇನ್ಶೂರೆನ್ಸ್ ಕ್ಲೈಮ್ ಆಗುತ್ತೆ. ಇನ್ಶೂರೆನ್ಸ್‌ನವರು ಎಲ್ಲಾ ಸರಿ ಮಾಡೋಣ ಅಂತ ಹೇಳಿ ಹೋಗಿದ್ದಾರೆಂದು ತಿಳಿಸಿದ್ದಾರೆ.
ಗ್ರಾಹಕರಿಗೆ ಅವರ ಹಣ ಸಿಗಲಿದೆ. ದರೋಡೆಕೋರರು 11 ಲಕ್ಷ ಹಣ ಕದ್ದೋಯ್ದಿದ್ದಾರೆ. ಬಹುಪಾಲು ಎಲ್ಲಾ ಚಿನ್ನವನ್ನೂ ದೋಚಿದ್ದಾರೆ. ಬ್ಯಾಂಕ್‌ನಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆ ಇದೆ. ಒಂದು ಕ್ಯಾಮೆರಾ ಸರಿಯಾಗಿ ಕೆಲಸ ಮಾಡ್ತಾಯಿರಲಿಲ್ಲ. ಅದನ್ನ ಸರಿಪಡಿಸಲು ಎಲ್ಲಾ ಕ್ಯಾಮೆರಾ ಆಫ್ ಮಾಡಿದ್ದೆವು. ಬ್ಯಾಂಕ್ ಸೈರನ್ ಸರಿ ಇದೆ. ಆದರೆ ರಾತ್ರಿ ಮಾತ್ರ ಕೆಲಸ ಮಾಡುತ್ತೆ. ಹಗಲು ಹೊತ್ತಿನಲ್ಲಿ ಸೈರನ್ ಆಫ್ ಮಾಡಿರ್ತೀವಿ ಎಂದಿದ್ದಾರೆ.
ರಾತ್ರಿ ಹೊತ್ತು ಸೆಕ್ಯೂರಿಟಿ ಗಾರ್ಡ್ ಇರ್ತಾರೆ ಹಗಲು ಹೊತ್ತಿನಲ್ಲಿ ಯಾರೂ ಇರೋದಿಲ್ಲ. ಇನ್ನೂ ಮುಂದೆಯಾದರೂ ದಿನದ 24 ಗಂಟೆ ಸೆಕ್ಯೂರಿಟಿ ನಿಯೋಜಿಸಲು ಚಿಂತಿಸಿದ್ದೇವೆ. ಯಾರೂ ಭಯ ಪಡುವ ಅವಶ್ಯಕತೆಯಿಲ್ಲ, ಪೊಲೀಸರು ಕಳ್ಳರನ್ನ ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.