ಉಡುಪಿ: ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಹೊಗಳಲು ಆಗದೆ ಮಾಜಿ ಸಿಎಂ ಸಿದ್ದರಾಮಯ್ಯ ಬಯ್ಯುತ್ತಿದ್ದಾರೆ. ನೆರೆ ಸಂತ್ರಸ್ತ ಸ್ಥಳಗಳಿಗೆ ಸಿಎಂ ಅವರ ಓಡಾಟ, ಪರಿಹಾರ ವಿತರಣೆ ಕಂಡು ಸಿದ್ದರಾಮಯ್ಯರಿಗೆ ಅರಗಿಸಿಕೊಳ್ಳಲಾಗದೆ ಹೀಗೆ ಮಾತನಾಡುತ್ತಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಅಮಿತ್ ಶಾ ಆಡಳಿತ ಹಾಗೂ ಬಿಎಸ್‍ವೈ ದೆಹಲಿ ಸಿಎಂ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಸಿಎಂಗೆ ಹೈಕಮಾಂಡ್, ಪ್ರಧಾನಿ, ಗೃಹ ಸಚಿವರು ಸಲಹೆ ಕೊಡೋದು ಸಹಜ. ಸಲಹೆಗಳು ರಾಜ್ಯದ ಹಿತಕ್ಕೆ ಪೂರಕವಾಗಿರುತ್ತದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಹುಲ್ ಗಾಂಧಿ ಸಲಹೆ ಕೇಳಲ್ವಾ ಎಂದು ಪ್ರಶ್ನಿಸಿದರು. ಬಳಿಕ ಉಸ್ತುವಾರಿ ಸಚಿವರ ನೇಮಕದಲ್ಲಿ ಯಾವುದೇ ಗೊಂದಲ ಇಲ್ಲ. ಮೂವರು ಡಿಸಿಎಂ ನೇಮಕದಿಂದ ಪ್ರವಾಹ ನಿರ್ವಹಣೆಗೆ ಅನುಕೂಲವಾಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚಾಮರಾಜನಗರದ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಆಕ್ಷೇಪಿಸಿಲ್ಲ, ತಮ್ಮ ಭಾವನೆ ಬಿಚ್ಚಿಟ್ಟಿದ್ದಾರೆ ಅಷ್ಟೇ ಎಂದರು. ನಂತರ ಮೀನುಗಾರರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ತರಲು ಚಿಂತನೆ ಮಾಡಿದ್ದೇವೆ. ಕಾರ್ಮಿಕ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ ಎಂದು ಶ್ರೀನಿವಾಸ ಪೂಜಾರಿ ತೀಳಿಸಿದರು.
ಯಡಿಯೂರಪ್ಪ ಸಿಎಂ ಆಗಬಾರದು ಎಂದು ಜೆಡಿಎಸ್ ಕಾಂಗ್ರೆಸ್ ಒಂದಾಗಿತ್ತು. ಈಗ ಇಬ್ಬರ ಅಸಮಾಧಾನ ಬಯಲಾಗಿದೆ. ನಾವು ಈ ಬಗ್ಗೆ ಏನೂ ಮಾತನಾಡದಿರಲು ನಿರ್ಧರಿಸಿದ್ದೇವೆ. ಸಿದ್ದರಾಮಯ್ಯನವರ ಹೇಳಿಕೆಗೆ ನಾನು ಉತ್ತರ ಕೊಡಲ್ಲ. ಅವರಿಗೆ ಒಳ್ಳೆಯ ಕೆಲಸವನ್ನು ಹೊಗಳಲು ಮನಸ್ಸಿಲ್ಲ. ಯಡಿಯೂರಪ್ಪ ನೆರೆ ಸಂತ್ರಸ್ತರ ಅಳಲು ಕೇಳಿದ್ದಾರೆ. ನೆರೆ ಸಂತ್ರಸ್ಥರು ಸಂಕಟದಲ್ಲಿದ್ದಾಗ ಸಿದ್ದರಾಮಯ್ಯ, ಕುಮಾರಸ್ವಾಮಿ ಯಾರೂ ಬಂದಿಲ್ಲ. ರಾಜ್ಯ ಓಡಾಡಿದವರು ಯಡಿಯೂರಪ್ಪ ಮತ್ತು ಟೀಂ ಎಂದು ಸಿಎಂ ಹಾಗೂ ಪಕ್ಷವನ್ನು ಹೊಗಳುತ್ತಾ, ಕೈ-ದಳವನ್ನು ಟೀಕಿಸಿದರು.