– ಸರ್ಕಾರದ ವಿರುದ್ಧ 3 ದಿನ ನಿರಂತರ ಪ್ರತಿಭಟನೆ
ಉಡುಪಿ: ಸಿಎಂ ಕುಮಾರಸ್ವಾಮಿ ಮಾಡಲು ಹೊರಟಿರುವ ಗ್ರಾಮ ವಾಸ್ತವ್ಯ ಅರ್ಥರಹಿತವಾದದ್ದು. ಮೊದಲು ಯೋಜನೆ ರೂಪಿಸಿ, ಆಮೇಲೆ ಗ್ರಾಮ ವಾಸ್ತವ್ಯ ಮಾಡಿ ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟೀಕೆ ಮಾಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜನ ಜಾನುವಾರುಗಳು ಗುಳೆ ಎದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆ ರೂಪಿಸದೆ ಗ್ರಾಮ ವಾಸ್ತವ್ಯದಿಂದ ಉಪಯೋಗವಿಲ್ಲ. ಕುಮಾರಸ್ವಾಮಿ ಅವರ ಹಳೆಯ ಗ್ರಾಮ ವಾಸ್ತವ್ಯದ ಫಲಿತಾಂಶವೇನು? ರಾಜ್ಯದ ಜನತೆಯ ಪ್ರಶ್ನೆಗೆ ಉತ್ತರಿಸಿ ಗ್ರಾಮ ವಾಸ್ತವ್ಯ ಮಾಡಿ ಎಂದರು.
Advertisement
Advertisement
ಈ ನಡುವೆ ವಿಧಾನ ಸೌಧಕ್ಕೆ ಯಾವ ಮಂತ್ರಿಗಳು ಬರುತ್ತಿಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲೆಯ ಸಮಸ್ಯೆಯ ಬಗ್ಗೆ ಅರಿಯುವ ಪ್ರಯತ್ನ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಕೊಟ್ಟ ಹಣವನ್ನು ರಾಜ್ಯ ಪೂರ್ಣ ಖರ್ಚು ಮಾಡಿಲ್ಲ ಎಂದು ಆರೋಪಿಸಿದರು.
Advertisement
ಮೂರು ದಿನ ಪ್ರತಿಭಟನೆ:
ಜಿಂದಾಲ್ ಕಂಪನಿಗೆ ಸರ್ಕಾರ ಅಕ್ರಮವಾಗಿ ಜಮೀನು ಕೊಡಲು ಮುಂದಾಗಿರುವ ಸರ್ಕಾರದ ನಡೆಯನ್ನು ಬಿಜೆಪಿ ಖಂಡಿಸುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. 13 ರಿಂದ 15 ರವರೆಗೆ ಬೆಂಗಳೂರಲ್ಲಿ ನಿರಂತರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
Advertisement
3667 ಎಕ್ರೆ ಭೂಮಿಯನ್ನು ಶುದ್ಧ ಕ್ರಯಪತ್ರ ಮಾಡಲು ಸಮ್ಮಿಶ್ರ ಸರ್ಕಾರ ಹೊರಟಿದೆ. ಸರ್ಕಾರ ಎಕರೆಗೆ 1.20 ಲಕ್ಷ ರೂ. ಕೊಡಲು ಮುಂದಾಗಿದೆ. ಆದರೆ ಆ ಜಮೀನು ಎಕರೆಗೆ ಎರಡು ಕೋಟಿ ರೂ. ಬೆಲೆ ಬಾಳುತ್ತದೆ. ಇದಕ್ಕೆ ಹೊರತಾಗಿ ಜಿಂದಾಲ್ ಸಂಸ್ಥೆಯಿಂದ ಸರ್ಕಾರಕ್ಕೆ 1,500 ಕೋಟಿ ರೂ. ಬಾಕಿಯಿದೆ ಎಂದು ಆರೋಪಿಸಿದರು.
ಯೋಜನೆ ವಿರೋಧಿಸಿ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ್ ಅವರೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇಷ್ಟಾದರೂ ಸರ್ಕಾರ ನಿಲುವು ಬದಲಿಸಿಲ್ಲ. ರಾಜ್ಯ ಸರ್ಕಾರದ ಹಲವು ಲೋಪದೋಷದ ವಿರುದ್ಧ ಬೆಂಗಳೂರಲ್ಲಿ ಈ ಪ್ರತಿಭಟನೆ ನಡೆಯುತ್ತದೆ ಎಂದು ಹೇಳಿದರು.