ಉಡುಪಿ: ಜಗದೀಶ್ ಶೆಟ್ಟರ್ (Jagadish Shettar) ಬಿಜೆಪಿಗೆ (BJP) ಮರಳುವ ನಿರೀಕ್ಷೆ ಇತ್ತು. ಅವರು ನಮ್ಮ ಸಿದ್ಧಾಂತದ ಜೊತೆಗೆ ಸುದೀರ್ಘ ಕಾಲ ಗುರುತಿಸಿಕೊಂಡಿದ್ದವರು. ಸೈದ್ಧಾಂತಿಕ ಹಿನ್ನೆಲೆಯವರಿಗೆ ಬೇರೆ ಪಕ್ಷ ಒಗ್ಗುವುದಿಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಆಗಮನದಿಂದ ಪಕ್ಷದ ಶಕ್ತಿ ವೃದ್ಧಿಯಾಗುತ್ತದೆ. ಇದರಿಂದ ನಮ್ಮ ವಿಶ್ವಾಸ ಹೆಚ್ಚಾಗಿದೆ. ಮತ್ತಷ್ಟು ನಾಯಕರು ಬಿಜೆಪಿಗೆ ಮರಳುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ನನ್ನ ನಿಲುವು ಸ್ಪಷ್ಟ, ನಾನು ಬಿಜೆಪಿಗೆ ಹೋಗಲ್ಲ: ಲಕ್ಷ್ಮಣ್ ಸವದಿ ಸ್ಪಷ್ಟನೆ
ಶೆಟ್ಟರ್ ಸುದೀರ್ಘ ರಾಜಕೀಯ ಅನುಭವಿ ಮತ್ತು ಮುತ್ಸದ್ದಿ. ಅವರು ಜನಸಂಘ ಕಾಲದಿಂದ ಬಿಜೆಪಿ ಕಟ್ಟಿದವರು. ಅವರು ಪಕ್ಷಕ್ಕೆ ಮರಳಿರುವುದು ಸಂತೋಷ ಹಾಗೂ ಸಮಾಧಾನ ತಂದಿದೆ. ಅವರು ಬಿಜೆಪಿಯ ಪರಮೋಚ್ಚ ನಾಯಕರನ್ನು ಎಂದೂ ಟೀಕಿಸಿಲ್ಲ. ಆರೋಗ್ಯಕರ ಟೀಕೆಗಳನ್ನು ಮಾತ್ರ ಮಾಡುತ್ತಿದ್ದರು. ಶೆಟ್ಟರ್ ಬಿಜೆಪಿಗೆ ಮರಳಿದ ಕ್ರೆಡಿಟ್ ಪಕ್ಷಕ್ಕೆ ಸಲ್ಲುತ್ತದೆ ಎಂದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ, ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್‍ಗೆ ಸೇರಿದ್ದರು. ಇದೀಗ, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಂದು (ಗುರುವಾರ) ದೆಹಲಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜೊತೆಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಸುದೀರ್ಘವಾದ ಚರ್ಚೆ ನಡೆಸಿದ್ದಾರೆ. ಈ ವೇಳೆ ಹಾವೇರಿ ಅಥವಾ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಂದು ಕ್ಷೇತ್ರಕ್ಕೆ ಟಿಕೆಟ್ ಕೊಡಿಸುವ ಭರವಸೆಯನ್ನು ಹೈಕಮಾಂಡ್ ನೀಡಿದೆ. ಇದನ್ನೂ ಓದಿ: ಇಲ್ಲಿಯವರೆಗೆ ಸಹಕಾರ ಕೊಟ್ಟಿದ್ದಕ್ಕೆ ಡಿಕೆಶಿ, ಸಿಎಂಗೆ ಧನ್ಯವಾದ ಸಲ್ಲಿಸಿದ್ರು ಶೆಟ್ಟರ್